ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ: ಒಎಂಆರ್ ಶೀಟ್ ನಾಲೆಗೆ ಎಸೆದಿದ್ದ ಮಂಜುನಾಥ್

Prasthutha|

ಬೆಂಗಳೂರು: ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಎದುರು, ಪ್ರಮುಖ ಆರೋಪಿ ಇಂಜಿನಿಯರ್ ಮಂಜುನಾಥ್ ಒಎಂಆರ್ ಶೀಟ್ ಗಳನ್ನು ನಾಲೆಗೆ ಎಸೆದು ಸಾಕ್ಷಿ ನಾಶ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿಐಡಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಮಂಜುನಾಥ್ ಸಂಚು ರೂಪಿಸಿ ಒಎಂಆರ್ ಶೀಟ್ ಗಳನ್ನು ನಾಲೆಗೆ ಎಸೆದಿರುವುದನ್ನು ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಮೂಲ ಒಎಂಆರ್ ಶೀಟಗೂ ಹಾಗೂ ಕಾರ್ಬನ್ ಪ್ರತಿಗೂ ಹೋಲಿಕೆ ಮಾಡಿದರೆ ವ್ಯತ್ಯಾಸ ಗೊತ್ತಾಗುವುದು ಖಚಿತ ಎಂದು ತನ್ನೊಂದಿಗೆ ಡೀಲ್ ಮಾಡಿಕೊಂಡ ಅಭ್ಯರ್ಥಿಗಳ ಕಾರ್ಬನ್ ಪ್ರತಿಯನ್ನು ಹರಿದು ಕಲಬುರಗಿ ನಗರದ ಹೊರವಲಯದ ಕೋಟನೂರು ಬಳಿಯ ದೊಡ್ಡ ನಾಲೆಗೆ ಎಸೆದಿದ್ದೆ ಎಂದು ಮಂಜುನಾಥ್ ಬಾಯ್ಬಿಟ್ಟಿದ್ದಾನೆ.
ಸಿಐಡಿ ಅಧಿಕಾರಿಗಳು ದೊಡ್ಡ ನಾಲೆ ಸ್ಥಳಕ್ಕೆ ಮಂಜುನಾಥ್ ನನ್ನು ಕರೆದುಕೊಂಡು ಹೋಗಿ ಎರಡು ದಿನಗಳ ಹಿಂದೆ ಮಹಜರು ನಡೆಸಿದ್ದಾರೆ.
ಈ ಮಧ್ಯೆ ಅಕ್ರಮದ ಕಿಂಗ್ ಪಿನ್ ಡಿವೈಎಸ್‌ಪಿ ಶಾಂತಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ..
ನೇಮಕಾತಿ ವಿಭಾಗದ ಡಿವೈಎಸ್ ಪಿಯಾಗಿದ್ದ ಶಾಂತ್ ಕುಮಾರ್ ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣದ ಸಂಬಂಧಿಸಿದಂತೆ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್ ರನ್ನು ವಿಚಾರಣೆಗೆ ಕರೆಸಿಕೊಂಡಿದ್ದ ಸಿಐಡಿ ಅಧಿಕಾರಿಗಳು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದರು.
ಶಾಂತಕುಮಾರ್ 1996 ರ ಬ್ಯಾಚ್ ನ ಸಿಎ ಆರ್ ಕಾನ್ಸ್ ಟೇಬಲ್ ಆಗಿದ್ದರು. ಆಗಲೇ ತಾಂತ್ರಿಕವಾಗಿ ತುಂಬಾ ಚುರುಕಾಗಿದ್ದರು. ಹೀಗಿದ್ದ ಶಾಂತಕುಮಾರ್ 2006 ರಲ್ಲಿ ಆರ್‌ಎಸ್ ಐ ಪರೀಕ್ಷೆ ಬರೆದು ಆರ್ ಎಸ್ ಐ ಆಗಿ ನೇಮಕಗೊಂಡು ಗುಲ್ಬರ್ಗದಲ್ಲಿ ಒಂದು ವರ್ಷ ತರಬೇತಿ ಮುಗಿಸಿ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಸೇವೆ ಸಲ್ಲಿಸಿದ್ದರು.
ಅಷ್ಟರಲ್ಲಾಗಲೇ ಪಿಎಸ್ಐ ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್‌ರನ್ನು ಸೇರಿಸಿಕೊಳ್ಳುತ್ತಾರೆ. 2007-08 ರಿಂದ ನೇಮಕಾತಿ ವಿಭಾಗದಲ್ಲೇ ಶಾಂತಕುಮಾರ್ ಠಿಕಾಣಿ ಹೊಡೆದಿದ್ದರು. ನೇಮಕಾತಿಯಲ್ಲಿ ಏನೇನಾಗುತ್ತೆ ಅನ್ನೋದನ್ನು ತಿಳಿದುಕೊಂಡಿದ್ದರು. ಕಳೆದ 2 ವರ್ಷದ ಹಿಂದೆ ಇನ್ಸ್‌ಪೆಕ್ಟರ್‌ನಿಂದ ಡಿವೈಎಸ್ಪಿ ಆಗಿ ಮುಂಬಡ್ತಿ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್ ಹಿಡಿತದಲ್ಲಿತ್ತು.
ಒಎಂಆರ್ ತಿದ್ದಲು ಶಾಂತಕುಮಾರ್ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

Join Whatsapp