ಹೊಸದಿಲ್ಲಿ: ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6,523 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮೂರು ಅತ್ಯಾಚಾರ ಪ್ರಕರಣಗಳಾಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮಣಿಪುರ ಪೊಲೀಸ್ ಉನ್ನತ ಅಧಿಕಾರಿಯೊಬ್ಬರು “6,523 ಎಫ್ಐಆರ್‌ಗಳ ಪೈಕಿ ಒಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಒಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಒಂದು ಅತ್ಯಾಚಾರ ಪ್ರಕರಣ ಸೇರಿದೆ. ಮಹಿಳೆಯರ ಮಾನ ಹಾನಿಗೆ ಸಂಬಂಧಿಸಿದಂತೆ 15 ಪ್ರಕರಣಗಳು ದಾಖಲಾಗಿವೆ.
ಹೆಚ್ಚಿನ ಪ್ರಕರಣಗಳು ಲೂಟಿ ಮತ್ತು ಬೆಂಕಿ ಹಚ್ಚಿರುವ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. “ಗಲಭೆಯಲ್ಲಿ ಇದುವರೆಗೂ ಒಟ್ಟು 168 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮೇಯಲ್ಲಿ 107 ಮಂದಿ, ಜೂನ್‌ನಲ್ಲಿ 38, ಜುಲೈಯಲ್ಲಿ 17 ಹಾಗೂ ಆಗಸ್ಟ್‌ನಲ್ಲಿ ಇದುವರೆಗೂ 6 ಮಂದಿ ಅಸುನೀಗಿದ್ದಾರೆ’ ಎಂದಿದ್ದಾರೆ.
ಅಸ್ಸಾಂ ರೈಫಲ್ಸ್ ವಿರುದ್ಧ ಪ್ರಕರಣ
ಇನ್ನೊಂದೆಡೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪದಲ್ಲಿ ಅಸ್ಸಾಂ ರೈಫಲ್ಸ್ ವಿರುದ್ಧ ಮಣಿಪುರ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.