ಚಿತ್ರದುರ್ಗ: ಕಲುಷಿತ ನೀರಿನಲ್ಲಿ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಪತ್ತೆ

Prasthutha|

ಚಿತ್ರದುರ್ಗ: ಕವಾಡಿಗರಹಟ್ಟಿ ಕಲುಷಿತ ನೀರಿನ ದುರಂತಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಪ್ರಯೋಗಾಲಯದ ವರದಿ ಮಂಗಳವಾರ ಲಭ್ಯವಾಗಿದ್ದು, ಕಲುಷಿತ ನೀರಿನಲ್ಲಿ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಪತ್ತೆ ಯಾಗಿರುವುದನ್ನು ಖಚಿತಪಡಿಸಿದೆ.

- Advertisement -

ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಮೂವರ ಭೇದಿಯ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು.

ಇದರಲ್ಲಿ ಎರಡು ಮಾದರಿಗಳಲ್ಲಿ ವಿಬ್ರಿಯೊ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ನೀರು ಕಲುಷಿತಗೊಂಡಿದ್ದರ ಪರಿಣಾಮ ಈ ಬ್ಯಾಕ್ಟೀರಿಯಾ ನೀರಿನಲ್ಲಿ ಸೇರಿರುವ ಸಾಧ್ಯತೆ ಇದೆ ಎನ್ನಲಾಗಿದೆ. ನಗರಸಭೆಯಿಂದ ಕವಾಡಿಗರಹಟ್ಟಿಗೆ ಪೂರೈಕೆ ಮಾಡಿದ್ದ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣ ಘಟಕ ಆ. 3ರಂದು ವರದಿ ನೀಡಿತ್ತು. ಕಾಲರಾ ಹರಡಬಹುದಾದ ಬ್ಯಾಕ್ಟೀರಿಯಾ ಕೂಡ ಪತ್ತೆಯಾಗಿತ್ತು. ಇದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರಿನ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು ಎಂದು ಡಿಎಚ್‌ಒ ಡಾ| ಆರ್‌. ರಂಗನಾಥ್‌ ಮಾಹಿತಿ ನೀಡಿದ್ದಾರೆ.

- Advertisement -

ಇನ್ನೊಂದೆಡೆ ಕವಾಡಿಗರಹಟ್ಟಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಮಂಗಳವಾರ 9 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಈವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ಮಂದಿ ಗುಣ ಮುಖರಾಗಿ ಮನೆಗೆ ಮರಳಿದ್ದಾರೆ. ಈವರೆಗಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 223ಕ್ಕೆ ಏರಿಕೆಯಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 170ಕ್ಕೆ ತಲುಪಿದೆ. ಪ್ರಸ್ತುತ 48 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

Join Whatsapp