ಮಂಗಳೂರು: ಕನ್ನಡ ರಾಜ್ಯೋತ್ಸವ ಸಂಭ್ರಮ

Prasthutha|

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

- Advertisement -

ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಸುನೀಲ್ ಕುಮಾರ್, ಸಾವಿರಾರು ವರ್ಷಗಳ ಸುಧೀರ್ಘ ಪರಂಪರೆಯಲ್ಲಿ ಕನ್ನಡ ಭಾಷೆ ತನ್ನ ಸ್ವರೂಪವನ್ನು ಹಾಗೂ ಸಮಾಜವನ್ನು ಸಶಕ್ತವಾಗಿ ಬೆಳೆಸಿದೆ. ಕನ್ನಡ ಭಾಷೆ ನಮ್ಮನ್ನು ನಾಗರಿಕರನ್ನಾಗಿಸಿದೆ, ಸುಸಂಸ್ಕೃತರನ್ನಾಗಿಸಿದೆ, ವಿವೇಕಿಗಳನ್ನಾಗಿಸಿದೆ. ಕನ್ನಡಿಗರು ಅತ್ಯಂತ ಸ್ನೇಹಶೀಲರಾದವರು ಹಾಗೂ ಮಾನವೀಯತೆ ಉಳ್ಳವರು, ಜ್ಞಾನಿಗಳು. ಭಾರತದ ಸುಧೀರ್ಘ ಇತಿಹಾಸದಲ್ಲಿ ಕನ್ನಡಿಗರು ಸಶಕ್ತವಾದ ಆಡಳಿತವನ್ನು ನೀಡಿದವರು. ಶಿಸ್ತುಬದ್ದವಾದ ಯೋಜನೆ, ಯೋಚನೆ, ಸೌಲಭ್ಯಗಳನ್ನು ತಮ್ಮ ಆಡಳಿತದಿಂದ ಒದಗಿಸಿದ ಪ್ರಭುತ್ವ ಕನ್ನಡಿಗರದ್ದಾಗಿತ್ತು. ವೈಜ್ಞಾನಿಕ ಮನೋಧರ್ಮ, ಸೂಕ್ಷ್ಮ ಸಂವೇದನೆ ಹೊಂದಿದ ನಮ್ಮ ಕವಿಗಳು ಹೊಸ ಬಗೆಯ ಅರಿವು, ಚಿಂತನೆಗಳನ್ನು ಕನ್ನಡ ಕಾವ್ಯಗಳಲ್ಲಿ ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಅಖಂಡ ಕರ್ನಾಟಕವನ್ನು ಕಟ್ಟಿದ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ ಎಂದರು.

ದಕ್ಷಿಣ ಕನ್ನಡ ಎಂದರೆ ಬುದ್ದಿವಂತರ ನಾಡು ಎನ್ನುವ ಮಾತು ಎಲ್ಲೆಲ್ಲೂ ಪ್ರಸಿದ್ಧ. ಕನ್ನಡ ಸಾಹಿತ್ಯದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕವಿ ಸಾಹಿತಿಗಳ ಕೊಡುಗೆ ಅಪೂರ್ವವಾಗಿದೆ. ೧೬ನೇ ಶತಮಾನದಲ್ಲಿ ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ ಮಹಾನ್ ಕವಿ ರತ್ನಾಕರ ವರ್ಣಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯವರು ಎಂಬುವುದೇ ಅತ್ಯಂತ ಹೆಮ್ಮೆಯ ವಿಚಾರ. ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯರಾದ ರತ್ನಾಕರ ವರ್ಣಿ ಶಾಂತಿಯ ಹರಿಕಾರನಂತೆ ಶಾಂತಿ ಮಂತ್ರವನ್ನು ಸಾಹಿತ್ಯದ ಮೂಲಕ ನೀಡಿರುವುದನ್ನು ಗಮನಿಸಬೇಕಾಗಿದೆ. ರತ್ನಾಕರ ವರ್ಣಿಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮತ್ತು ಕನ್ನಡದ ಸೇವೆ ನಿಜಕ್ಕೂ ವರ್ಣಿಸಲು ಅಸಾಧ್ಯ ಎಂದರು.



Join Whatsapp