ಮಂಗಳೂರು: ಮೂಲ ಸೌಕರ್ಯಗಳಿಲ್ಲದ ಬಲ್ಮಠದ ಸರ್ಕಾರಿ ಶಾಲೆ; ಬಡ ವಿದ್ಯಾರ್ಥಿಗಳ ಬವಣೆ ಕೇಳುವವರಿಲ್ಲ !

Prasthutha|

ಮಂಗಳೂರು:  ಒಂದೇ ಕೊಠಡಿಯಲ್ಲಿ  ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳು  ಕಲಿಯುತ್ತಿರುವ ಶೋಚನೀಯ ಅವಸ್ಥೆ  ಮಂಗಳೂರಿನ ಬಲ್ಮಠದಿಂದ ವರದಿಯಾಗಿದೆ.

- Advertisement -

ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಮಂಗಳೂರಿನ ಬಲ್ಮಠ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕೊಠಡಿಯಿದ್ದು,  ಅದರಲ್ಲೇ  ಒಂದರಿಂದ ಏಳನೇ ತರಗತಿವರೆಗಿನ 43 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಮೂವರು ಶಿಕ್ಷಕರಿರುವ  ಈ ಶಾಲಾ ಕೊಠಡಿಯ ಒಂದೊಂದು ಭಾಗದಲ್ಲಿ ಒಂದೊಂದು ತರಗತಿಯ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠಗಳು ನಡೆಯುತ್ತಿವೆ. ಸರಿಯಾದ ಶೌಚಾಲಯದ  ವ್ಯವಸ್ಥೆಯೂ ಇಲ್ಲದ ಕಾರಣ  ಶಿಕ್ಷಕರಿಗೂ, ಮಕ್ಕಳಿಗೂ ಬಯಲೇ ಶೌಚಾಲಯವಾಗಿದೆ.

- Advertisement -

“ಈ  ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ  ದ.ಕ ಜಿಲ್ಲಾ ಡಿವೈಎಫ್‌ಐ ಕಾರ್ಯದರ್ಶಿ ಸಂತೋಷ್ ಬಜಾಲ್,  ಆರ್ಥಿಕವಾಗಿ ಹಿಂದುಳಿದ ವಲಯದಿಂದ ಬಂದ ಹೆಚ್ಚಿನ ಮಕ್ಕಳು  ಈ ಶಾಲೆಯಲ್ಲಿ  ಕಲಿಯುತ್ತಿದ್ದು,  ಮೂಲಸೌಕರ್ಯ ಕೊರತೆಯಿರುವ ಕಾರಣ ನೀಡಿ ಕೆಲವು ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ.  43 ವಿದ್ಯಾರ್ಥಿಗಳಿರುವ ಶಾಲೆಗೆ ಕೇವಲ ಇಬ್ಬರು ಖಾಯಂ ಶಿಕ್ಷಕರಿದ್ದು, ದೈಹಿಕ ಶಿಕ್ಷಣದ ಶಿಕ್ಷಕರಿಲ್ಲ. ಮಧ್ಯಾಹ್ನದ ಊಟ ತಯಾರಿಸಲು ಹಾಗೂ  ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ  ಮಕ್ಕಳು ವ್ಯಾಸಂಗ ಮಾಡಲು ಹೇಗೆ ಸಾಧ್ಯ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕ್ಷೇತ್ರ  ಶಿಕ್ಷಣಾಧಿಕಾರಿ (ಬಿಇಒ) ಸದಾನಂದ ಪೂಂಜಾ ಅವರಿಗೆ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮಕ್ಕಳ ಪೋಷಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಇಒ ಸದಾನಂದ ಪೂಂಜಾ,  ಎರಡು ಶೌಚಾಲಯಗಳನ್ನು ಮಂಜೂರು ಮಾಡಲಾಗಿದೆ. ಕ್ಯಾಂಪಸ್‌ನಲ್ಲಿರುವ ಹಳೆಯ ಕಾಲೇಜು ಕಟ್ಟಡದಲ್ಲಿ ಐದು ಕೊಠಡಿಗಳಿದ್ದು, ತಾತ್ಕಲಿಕವಾಗಿ ಮಕ್ಕಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಪ್ರೌಢಶಾಲೆಯಲ್ಲೂ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ” ಎಂದು ಹೇಳಿದರು.

Join Whatsapp