ಮಂಗಳೂರು: ಗೃಹ ಬಳಕೆ ನೀರಿನ ದರ ಪರಿಷ್ಕರಣೆಗೆ ಕತ್ತರಿ; ಆಗಸ್ಟ್ 1ರಿಂದ ಹೊಸ ದರ ಜಾರಿ

Prasthutha|

ಮಂಗಳೂರು:  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದ ನೀರಿನ ದರ ಪರಿಷ್ಕರಣೆಗೆ ರಾಜ್ಯ ಸರಕಾರ ಕತ್ತರಿ ಹಾಕಿದ್ದು, ಈ ಹಿಂದಿನ ದರವೇ ಜಾರಿಗೆ ಬರಲಿದೆ. ನಗರಾಭಿವೃದ್ಧಿ ಇಲಾಖೆ ಆಗಸ್ಟ್ 1ರಿಂದ ಪರಿಷ್ಕೃತ ಆದೇಶ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

- Advertisement -

ಬಿಜೆಪಿ ಅವಧಿಯಲ್ಲಿ ಜನಸಾಮಾನ್ಯರ ಗೃಹ ಬಳಕೆಯ, ನೀರಿನ ದರ ಹೆಚ್ಚಿದ್ದರಿಂದ ವಿಪಕ್ಷಗಳು ಮತ್ತು ಸಾಮಾನ್ಯ ಜನರಿಂದಲೂ ವಿರೋಧ ವ್ಯಕ್ತವಾಗಿತ್ತು. ಗೃಹ ಬಳಕೆ ನೀರಿನ ದರ ಪರಿಷ್ಕರಣೆ ಕುರಿತು ಕಳೆದ ಮೇ 31ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ, ಪಾಲಿಕೆಯ ನಿರ್ಣಯಕ್ಕೆ ಅನುಮೋದನೆ ಸಿಕ್ಕಿರಲಿಲ್ಲ.

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರಾಜ್ಯ ಸರಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಪಾಲಿಕೆಗೆ ಆದಾಯ ಕೊರತೆ ಆಗದಂತೆ ಮತ್ತು ಬಡಜನರಿಗೂ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ  ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಷರತ್ತಿನೊಂದಿಗೆ ಅನುಮತಿ ನೀಡಿದ್ದಾರೆ. ಆಗಸ್ಟ್ 1ರಿಂದ ಒಂದು ವರ್ಷದ ಅವಧಿಗೆ ಮಾತ್ರ ಈ ದರ ಪಟ್ಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಒಂದು ವರ್ಷದ ನಂತರ ಮಹಾನಗರ ಪಾಲಿಕೆಯು ದರ ಪರಿಷ್ಕರಣೆ ಕುರಿತು ನಿರ್ಧಾರ ಕೈಗೊಂಡು ಸರಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Join Whatsapp