ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ನಿಧನ

Prasthutha|

ಮೈಸೂರು: ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ.ಶೇಖ್ ಅಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಮಂಗಳೂರು ವಿಶ್ವವಿದ್ಯಾಲಯ ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾಗಿದ್ದ ಅಲಿಯವರು, ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು.

- Advertisement -

ಅವರು ಮೈಸೂರು ವಿ.ವಿ.ಯಿಂದ ಆನರ್ಸ್ ಪದವಿ ಹಾಗೂ ಆಲಿಘರ್ ಮುಸ್ಲಿಂ ವಿ.ವಿ,ಯಿಂದ ಪಿಎಚ್ ಡಿ ಪಡೆದಿದ್ದರು. ಮೈಸೂರು ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು.
ಪ್ರೊ. ಶೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ವಿ.ವಿ.ಪ್ರಕಟಿಸಿರುವ ”ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಅಲಿಯವರು ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

- Advertisement -

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.

ಪ್ರೊ.ಬಿ. ಶೇಖ್ ಅಲಿ ನಿಧನಕ್ಕೆ ಕ್ಯಾಂಪಸ್ ಫ್ರಂಟ್ ಸಂತಾಪ

ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾಗಿದ್ದ ಹಾಗೂ ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ. ಶೇಖ್ ಅಲಿಯವರ ನಿಧನವು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.

 ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವು ವರ್ಷಗಳ ಕಾಲ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು ವಿಶ್ವವಿದ್ಯಾನಿಲಯದ ಅಭಿವೃದ್ದಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದರು. ಅದಲ್ಲದೆ ಗೋವಾ ವಿಶ್ವವಿದ್ಯಾನಿಲಯದಲ್ಲೂ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇತಿಹಾಸ ತಜ್ಞರಾಗಿದ್ದ ಪ್ರೊ.ಬಿ. ಶೇಖ್ ಅಲಿಯವರ ಕೊಡುಗೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾಗಿದ್ದು, ಇವರ ನಿಧನವು ನೋವನ್ನು ತಂದಿದೆ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Join Whatsapp