ಹೈಕೋರ್ಟ್ ತೀರ್ಪು ಪದವಿ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಎಂದು ಮಂಗಳೂರು ವಿವಿಯ ಸುತ್ತೋಲೆ ಹೊರಡಿಸಬೇಕು: ಸಮನ್ವಯ ಸಮಿತಿ

Prasthutha|

ಮಂಗಳೂರು: ಹಿಜಾಬ್ ವಿಚಾರವಾಗಿ ಹೈಕೋರ್ಟ್ ಈಗಾಗಲೇ ತೀರ್ಪನ್ನು ನೀಡಿದ್ದು, ಇದು ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯ ಎಂದು ಸ್ಪಷ್ಟಪಡಿಸಿದೆ. ಆದರೆ ಈ ತೀರ್ಪನ್ನು ನೆಪವಾಗಿಟ್ಟುಕೊಂಡು ಕೆಲವೊಂದು ಪದವಿ ಕಾಲೇಜುಗಳು ಕೂಡ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ವಿದ್ಯಾರ್ಥಿನಿಯರನ್ನು ತರಗತಿ ಹಾಜರಾಗಲು, ಪರೀಕ್ಷೆ ಬರೆಯಲು ತಡೆಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಸಮನ್ವಯ ಸಮಿತಿ ಆರೋಪಿಸಿದೆ.

- Advertisement -


ಹೈಕೋರ್ಟ್ ತೀರ್ಪು ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಅಲ್ಲಿನ ಸಿಡಿಸಿ ಕಮಿಟಿಯು ನಿರ್ಣಯಿಸಿದ ಸಮವಸ್ತ್ರ, ಖಾಸಗಿ ಶಾಲೆಗಳಲ್ಲಿ ಮ್ಯಾನೇಜ್ ಮೆಂಟ್ ಹಾಗೂ ಸಿಡಿಸಿ ಕಮಿಟಿ ತೀರ್ಮಾನಿಸಿದ ಸಮವಸ್ತ್ರ, ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯು ಬೋರ್ಡ್ ನಿಗದಿಪಡಿಸಿದ ಸಮವಸ್ತ್ರವೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದರು. ಇದರಲ್ಲಿ ಎಲ್ಲಿಯೂ ಪದವಿ ಕಾಲೇಜುಗಳ ಸಮವಸ್ತ್ರ ಬಗ್ಗೆ ಉಲ್ಲೇಖಿಸಿಲ್ಲ. ಯುಜಿಸಿ ಕೂಡ ಪದವಿ ಕಾಲೇಜುಗಳಿಗೆ ಸಮವಸ್ತ್ರ ನಿಗದಿಪಡಿಸಿಲ್ಲ.

ಮಂಗಳೂರು ವಿಶ್ವವಿದ್ಯಾನಿಲಯವು ಎಲ್ಲಾ ಪದವಿ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಇದನ್ನು ಪದವಿ ಕಾಲೇಜುಗಳು ದುರುಪಯೋಗ ಪಡಿಸುತ್ತಿವೆ. ಪದವಿ ಕಾಲೇಜುಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಮೂಲಕ ಪದವಿ ಕಾಲೇಜುಗಳಿಗೆ ಹೈಕೋರ್ಟ್ ತೀರ್ಪು ಅನ್ವಯವಾಗುವುದಿಲ್ಲ ಎನ್ನುವುದನ್ನು ತಿಳಿಯಪಡಿಸಬೇಕು. ವಿದ್ಯಾರ್ಥಿಗಳನ್ನು ಹೊರ ಹಾಕಿದ ಕಾಲೇಜುಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಮನ್ವಯ ಸಮಿತಿಯು ಇದರ ವಿರುದ್ಧ ತೀವ್ರ ಹೋರಾಟ ನಡೆಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಡಾ.ಕಿಶೋರ್ ಕುಮಾರ್ ಸಿ.ಕೆ ರವರಿಗೆ ಮನವಿ ಸಲ್ಲಿಸಲಾಯಿತು.

- Advertisement -


ಈ ಸಂಧರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಮನ್ವಯ ಸಮಿತಿ ಚೇರ್ಮನ್ ರಿಯಾಝ್ ಅಂಕತಡ್ಕ, ಕನ್ವಿನರ್ ಅಶಾಮ್, ಮಾದ್ಯಮ ವಕ್ತಾರರಾದ ಜಾಬೀರ್, ಸಮಿತಿ ಸದಸ್ಯರಾದ ಮುಕ್ತಾರ್, ಝಾಹಿದ್ ಉಪಸ್ಥಿತರಿದ್ದರು.

Join Whatsapp