ಮಂಗಳೂರು: ನಗರದ ಸುರತ್ಕಲ್ NITK ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಪತ್ಬಾಂಧವ ಆಸಿಫ್ ಮೇಲೆ ಮಂಗಳಮುಖಿಯರಿಂದ ಹಲ್ಲೆ ಯತ್ನ ನಡೆದಿದ್ದಾಗಿ ಆರೋಪಿಸಲಾಗಿದೆ.
ಕಳೆದ ತಡರಾತ್ರಿ ಘಟನೆ ನಡೆದಿದ್ದಾಗಿ ಆಸಿಫ್ ತನ್ನ ಫೇಸ್ಬುಕ್ ಲೈವ್ ಮೂಲಕ ಖಚಿತಪಡಿಸಿದ್ದಾರೆ.
ಅಕ್ರಮ ಟೋಲ್ ಸುಂಕ ವಸೂಲಿ ವಿರುದ್ಧ ಕಳೆದ ಹತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಸಿಫ್ ಅವರು ತಂಗಿದ್ದ ವೇದಿಕೆಯತ್ತ ನುಗ್ಗಿ ಐದಾರು ಮಂದಿ ಮಂಗಳಮುಖಿಯರು ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆಸಿಫ್ ಆರೋಪಿಸಿದ್ದಾರೆ.
ಟೋಲ್ ಗೇಟ್ ವಿರುದ್ಧ ಧರಣಿ ನಡೆಸುತ್ತಿರುವ ಕಾರಣಕ್ಕಾಗಿ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಮಂಗಳಮುಖಿಯರನ್ನು ಛೂ ಬಿಟ್ಟಿದ್ದಾಗಿ ಆಸಿಫ್ ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.