ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ 2019-20ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಸಂಧ್ಯಾ 9ನೇ Rank ಗಳಿಸಿ ಸಾಧನೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಇದುವರೆಗೆ ಶಿಕ್ಷಕಿಯಾಗಿದ್ದುಕೊಂಡು ಪದವಿ ಶಿಕ್ಷಣ ಮುಗಿಸಿದ ಜಿಲ್ಲೆಯ ಮೊತ್ತ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಶ್ರೀಮತಿ ಸಂಧ್ಯಾ ಪಾತ್ರರಾಗಿದ್ದಾರೆ.
ಸಂಧ್ಯಾ ಸ್ವತಃ ಒಬ್ಬ ಸೇವಾ ನಿರತ ಶಿಕ್ಷಕಿಯಾಗಿದ್ದು, ಇವರು ಎರಡು ಮಕ್ಕಳ ತಾಯಿಯಾಗಿ ಈ ಸಾಧನೆ ಮಾಡುವ ಮೂಲಕ ಎಲ್ಲರ ಅಚ್ಚರಿ ಮತ್ತು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸಂಧ್ಯಾ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮೂರು ವರ್ಷದ ಬಿ.ಎ. (ಆಂಗ್ಲ) ಪದವಿಯನ್ನು ಈ ಮೂಲಕ ಯಶಸ್ವಿಯಾಗಿ ಮುಗಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ 2010 ರಿಂದ ಸೇವಾನಿರತ ಶಿಕ್ಷಕರಿಗೆ ಪದವಿ ವ್ಯಾಸಂಗ ಮಾಡುವ ಅವಕಾಶ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದು ಶಿಕ್ಷಣ ಇಲಾಖೆಯಲ್ಲೂ ಸಂಧ್ಯಾ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆಗೆ ಶಿಕ್ಷಣಾಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಲಾವಿದ ಹಾಗೂ ಸೃಜನಶೀಲ ಶಿಕ್ಷಕ ಪ್ರೇಮನಾಥ್ ಮರ್ಣೆ ಅವರ ಪತ್ನಿಯಾಗಿರುವ ಸಂಧ್ಯಾ, ಮಂಗಳೂರಿನ ಆಕಾಶಭವನದ ಪ್ರಭಾಕರ ಆಚಾರ್ಯ ಪಾರ್ವತಿ ದಂಪತಿಯ ಪುತ್ರಿ.
ಪ್ರಸ್ತುತ ಮಂಗಳೂರು ದಕ್ಷಿಣ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಮದೋಟ ಇಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರು ವಿವಿ ಪದವಿ ಪರೀಕ್ಷೆ : ಎರಡು ಮಕ್ಕಳ ತಾಯಿಗೆ 9ನೇ ರಾಂಕ್ | ಶಿಕ್ಷಕಿಯ ಅನುಪಮ ಸಾಧನೆ
Prasthutha|