ಡ್ರಗ್ಸ್ ವಿರುದ್ಧ ಮುಂದುವರಿದ ಮಂಗಳೂರು ಪೊಲೀಸ್ ಕಾರ್ಯಾಚರಣೆ: 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ನಾಲ್ವರ ಬಂಧನ

Prasthutha|

ಮಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಮಂಗಳವಾರ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 10 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಕಮಿಷನರೇಟ್ ವ್ಯಾಪ್ತಿಯ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

- Advertisement -

ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗ್ಡೆ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಫಳ್ನೀರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬೆಂಗಳೂರಿನಿಂದ ತಂದಿದ್ದು ಎನ್ನಲಾದ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಕೇರಳದ ಕಾಸರಗೋಡು ಜಿಲ್ಲೆಯ ಮೊಹಮ್ಮದ್ ಹನೀಫ್, ಸೈಯದ್ ಫೌಜಾನ್​, ಸಿರಾಜುದ್ದೀನ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ.

- Advertisement -

ಕಾರ್ಯಾಚರಣೆಯಲ್ಲಿ 5,00,000 ರೂಪಾಯಿ ಮೌಲ್ಯದ 100 ಗ್ರಾಂ ಎಂಡಿಎಂಎ, 4000 ರೂಪಾಯಿ ನಗದು, ಒಂದು ಮಾರುತಿ ಸ್ವಿಫ್ಟ್ ಕಾರು, ಮೂರು ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ತೂಕದ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 10,94,500 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ಅಳಪೆ ಗ್ರಾಮದ ಕಂಕನಾಡಿ ರೈಲು ನಿಲ್ದಾಣದ ರಸ್ತೆಯ ಬಳಿ ಅಕ್ರಮವಾಗಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತ ಆರೋಪಿ ಇಬ್ರಾಹಿಂ ಅರ್ಷದ್ ವಿಕೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಿಯಪದವು ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp