► ಸಾಯುವವರೆಗೂ ಹುಟ್ಟೂರಿನ ಬಗ್ಗೆ ತಿಳಿಸದ ತಂದೆ
ಮಂಗಳೂರು: ಕಳೆದ 42 ವರ್ಷಗಳ ಹಿಂದೆ ಊರು ಬಿಟ್ಟಿದ್ದ ಮಂಗಳೂರು ಮೂಲದ ಅಹ್ಮದ್ ಹಾಜಿ ಖದೀಜಾ ದಂಪತಿಯ ಪುತ್ರ ಮುಹಮ್ಮದ್ (63) ಎಂಬವರು ಜುಲೈ 3ರಂದು ಕೇರಳದ ಕಲ್ಲಿಕೋಟೆಯ ಕರುವಂತಿರುತ್ತಿಯಲ್ಲಿ ನಿಧನರಾಗಿದ್ದು, ಮೃತ ತಂದೆಯ ಕುಟುಂಬಿಕರ ಹುಡುಕಾಟದಲ್ಲಿ ಮಕ್ಕಳು ನಿರತರಾಗಿದ್ದಾರೆ.
ಮೂಲತಃ ಮಂಗಳೂರಿನವರಾದ ಮುಹಮ್ಮದ್ 1980ರಲ್ಲಿ ಮನೆ ಬಿಟ್ಟು ಕೇರಳಕ್ಕೆ ಹೋದವರು ಮತ್ತೆ ಮನೆಯ ಕಡೆ ಮುಖಮಾಡಿರಲಿಲ್ಲ. ಕೂಲಿ ಕೆಲಸ ನಿರ್ವಹಿಸುತ್ತಲೇ ಕೇರಳದಲ್ಲೇ ವಿವಾಹವಾಗಿ ಜೀವನ ನಡೆಸುತ್ತಿದ್ದರು. ಮೃತ ಮುಹಮ್ಮದ್ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿಯಿದ್ದಾರೆ.
ಕಳೆದ 42 ವರ್ಷಗಳಿಂದ ಮುಹಮ್ಮದ್ ಅವರಿಗೆ ಮಂಗಳೂರಿನಲ್ಲಿ ನೆಲೆಸಿದ್ದ ಕುಟುಂಬದವರೊಂದಿಗೂ, ಊರಿನವರೊಂದಿಗೂ ಯಾವುದೇ ಸಂಪರ್ಕ ಇರಲಿಲ್ಲ. ಮಕ್ಕಳು ಅವರ ಕುಟುಂಬದ ಬಗ್ಗೆ ಮಾಹಿತಿ ಕೇಳಿದ್ದರೂ ಸುಮ್ಮನಾಗಿಬಿಡುತ್ತಿದ್ದರು.
ಆದರೆ, ಮುಹಮ್ಮದ್ ಅವರು ಮರಣ ಹೊಂದುವ ಮೊದಲು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಸಂದರ್ಭದಲ್ಲಿ ತನ್ನ ಮಕ್ಕಳನ್ನು ಕರೆದು ಮಂಗಳೂರಿನ ಉಳ್ಳಾಲ ಭಾಗದಲ್ಲಿ ಅವರ ಕುಟುಂಬದ ವಾಸಿಸುತ್ತಿದ್ದರು ಎಂದು ತಿಳಿಸುತ್ತಾರೆ. ಆದರೆ, ಅನಾರೋಗ್ಯದಿಂದಾಗಿ ಕುಟುಂಬಿಕರ ವಿಳಾಸವನ್ನು ತಿಳಿಸಲು ಅವರಿಗೆ ಸಾಧ್ಯವಾಗಿಲ್ಲ. ಈ ನಡುವೆ ತಂದೆ ನಿಧನರಾಗಿದ್ದಾರೆ ಎಂದು ಅವರ ಪುತ್ರ ನಸೀಮ್ ವಿವರಿಸುತ್ತಾರೆ.
ನಮಗೆ ತಂದೆಯ ಕುಟುಂಬದ ಸಂಪರ್ಕ ಗಳಿಸಬೇಕೆಂಬ ಮಹದಾಸೆ ಇದೆ. ಮಂಗಳೂರು, ಉಳ್ಳಾಲ ಭಾಗದಲ್ಲಿ ಯಾರಿಗಾದೂ ತನ್ನ ತಂದೆಯ ಕುಟುಂಬದ ಪರಿಚಯವಿದ್ದರೆ ತಿಳಿಸಬೇಕು ಎಂದು ಮುಹಮ್ಮದ್ ಅವರ ಪುತ್ರ ನಸೀಮ್ ಎ.ಎಮ್ ಮನವಿ ಮಾಡಿದ್ದಾರೆ.
ನಸೀಮ್ ಅವರು ನನ್ನ ಪರಿಚಯಸ್ಥರು. ಅವರು ಮತ್ತು ನಾನು ಒಂದೇ ಊರಿನಲ್ಲಿ ಹಲವು ವರ್ಷಗಳಿಂದ ವಾಸವಿದ್ದೇವೆ. ಇತ್ತೀಚೆಗೆ ಅವರ ತಂದೆ ನಿಧನರಾದರು. ಅವರ ತಂದೆ ಮಂಗಳೂರು ಮೂಲದವರು ಎಂದು ವಕೀಲರಾದ ರಫೀಕ್ ಕ್ಯಾಲಿಕಟ್ ತಿಳಿಸಿದ್ದಾರೆ.
ನಸೀಮ್ ಅವರ ಸಂಪರ್ಕ ಸಂಖ್ಯೆ: 7736704764.