ಮಂಗಳೂರು: ನವರಾತ್ರಿ ವ್ಯಾಪಾರದಲ್ಲಿ ಮುಸ್ಲಿಮರಿಗೆ ನಿಷೇಧವನ್ನು ಪ್ರತಿಭಟಿಸಿದ ಹಿಂದೂ ವ್ಯಾಪಾರಿಗಳು

Prasthutha|

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜಾತ್ರೆ, ನೇಮ ಸೇರಿದಂತೆ ಇನ್ನಿತರ ಧಾರ್ಮಿಕ ಸಮಾರಂಭಗಳಲ್ಲಿ ಕಳೆದ ಕೆಲ ವರ್ಷಗಳಿಂದೀಚೆಗೆ ಅನ್ಯ ಧರ್ಮೀಯ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕಲಾಗುತ್ತಿದೆ. ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿರ್ಬಂಧ ಹಾಕುವುದನ್ನು ಹಿಂದುತ್ವ ಪರ ಸಂಘಟನೆಗಳು ಜಾತ್ರೆಯಿಂದ ನವರಾತ್ರಿ ಉತ್ಸವಕ್ಕೂ ಮುಂದುವರಿಸಿದ್ದು, ಮಂಗಳೂರಿನ ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ ಅನ್ಯಧರ್ಮದ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ ಇತ್ತೀಚೆಗೆ ಬ್ಯಾನರ್ ಹಾಕಲಾಗಿತ್ತು.

- Advertisement -

ಹಿಂದುತ್ವ ಪರ ಸಂಘಟನೆಗಳ ನಡೆಗೆ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಪ್ರತಿರೋಧ ವ್ಯಕ್ತಪಡಿಸಿದೆ. ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹಾಕುವ ನಡೆಗೆ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಖಂಡನೆ ವ್ಯಕ್ತವಾಗಿದ್ದು, ಸ್ವತಃ ಹಿಂದೂ ವ್ಯಾಪಾರಸ್ಥರೇ ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರಿನ ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ ಅನ್ಯಧರ್ಮದ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ಮಂಗಳೂರಿನ ಟೌನ್ ಹಾಲ್ ಮುಂಭಾಗ ವ್ಯಾಪಾರಿಗಳ ಪ್ರತಿಭಟನೆ ನಡೆಸಲಾಗಿದೆ.

- Advertisement -

ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಅನ್ಯ ಧರ್ಮೀಯರಿಗೆ ವ್ಯಾಪಾರ ನಿರಾಕರಣೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಪಾಲಿಕೆಗೆ ಸೇರುವ ಜಾಗದಲ್ಲಿ ವ್ಯಾಪಾರ ನಿರಾಕರಿಸಿದ್ದಕ್ಕೆ ದ.ಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧವೂ ಪ್ರತಿಭಟನಾಕಾರರು ಕಿಡಿ ಕಾರಿದ್ದಾರೆ.

ಆಡಳಿತ ಮಂಡಳಿಯ ಈ ನಡೆಗೆ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ರೀತಿ ಮಾಡಿದರೆ ನಾವು ಜಾತ್ರಾ ವ್ಯಾಪಾರಸ್ಥರ ಸಮಿತಿ, ಇದನ್ನ ನಾವು ಬಿಡಲ್ಲ. ನಾವು ಮಂಗಳಾದೇವಿ ಜಾತ್ರೆಯಲ್ಲಿ ಎಲ್ಲರಿಗೂ ಅವಕಾಶ ಕೊಡಬೇಕು ಅಂತೀವಿ.‌ ಕೊಡದಿದ್ದರೆ‌ ನಾವು ಅಲ್ಲಿ ಖಂಡಿತಾ ತಕರಾರು ತೆಗೆತೀವಿ. ಏನಾದ್ರೂ ಆದರೆ‌ ಅದಕ್ಕೆ ಮಂಗಳೂರು ಪಾಲಿಕೆ‌ ಮತ್ತು ಜಿಲ್ಲಾಡಳಿತ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ಸೇರಿರೋ ಸರ್ಕಾರಿ ರಸ್ತೆ ಆಗಿದ್ದು, ಆದರೆ ಹಲವು ವರ್ಷಗಳಿಂದ ಈ ರಸ್ತೆಯ ಬದಿಗಳಲ್ಲಿ ನವರಾತ್ರಿ ಜಾತ್ರಾ ವ್ಯಾಪಾರಕ್ಕೆ ಪಾಲಿಕೆ ರಸ್ತೆಯಾದ್ರೂ ದೇವಸ್ಥಾನದ ಆಡಳಿತದಿಂದಲೇ ಜಾಗ ಹರಾಜು ನಡೆಯುತ್ತಿದೆ. ರಾಜ್ಯದ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರೋ ಮಂಗಳಾದೇವಿ ದೇವಸ್ಥಾನದ ಎದುರಿನ ರಸ್ತೆ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಹರಾಜು ಆಗ್ತಿದೆ. ಪ್ರತೀ ವರ್ಷ ಮುಸ್ಲಿಂ ವ್ಯಾಪಾರಿಗಳಿಂದಲೂ ಜಾತ್ರೆಯಲ್ಲಿ ವ್ಯಾಪಾರ ನಡೀತಾ ಇದ್ದು, ಆದರೆ ಈ ಬಾರಿ ಆಡಳಿತ ಮಂಡಳಿಯಿಂದಲೇ ನಿರ್ಬಂಧ ಆರೋಪ ವ್ಯಕ್ತವಾಗಿದೆ.

Join Whatsapp