ಮಂಗಳೂರು: ಐಸಿಯು ಆಂಬುಲೆನ್ಸ್ ಗೆ ಅಡ್ಡಲಾಗಿ ಕಾರು ಚಲಾಯಿಸಿ ಹುಚ್ಚಾಟ: ಸುಮಾರು 30 ಕಿ.ಮೀ. ವರೆಗೂ ಸತಾಯಿಸಿದ ಯುವಕರು!

Prasthutha|

►ಕಾರು ಚಾಲಕನ ವಿರುದ್ಧ ಕ್ರಮಕ್ಕೆ ಆಂಬುಲೆನ್ಸ್ ಚಾಲಕರ ಆಗ್ರಹ

- Advertisement -

ಮಂಗಳೂರು: ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಲಾಗಿ ಸುಮಾರು 30 ಕಿಲೋ ಮೀಟರ್ ತನಕ ದಾರಿ ಬಿಡದೇ ಕಾರು ಚಾಲಕನೋರ್ವ ಸತಾಯಿಸಿದ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಭಟ್ಕಳಕ್ಕೆ ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದಾಗಿ ಖಾಸಗಿ ಆಸ್ಪತ್ರೆ  ಆಂಬುಲೆನ್ಸ್ ಚಾಲಕ ಅಯ್ಯೂಬ್ ‘ಪ್ರಸ್ತುತ ನ್ಯೂಸ್’ ಗೆ ತಿಳಿಸಿದ್ದಾರೆ.

- Advertisement -

ಮುಲ್ಕಿಯಿಂದ ಆಂಬುಲೆನ್ಸ್ ಮುಂಭಾಗಕ್ಕೆ ಬಂದ ಕೆಎ19 ಎಂಡಿ6843 ನೋಂದಣಿ ಸಂಖ್ಯೆಯ ಚೆವರ್ಲೋ ಬೀಟ್ ಕಾರು ತದನಂತರ ಉಡುಪಿ ನಗರದವರೆಗೂ ದಾರಿ ಬಿಟ್ಟು ಕೊಡದೇ ಅಡ್ಡಾದಿಡ್ಡಿಯಾಗಿ ಸಂಚರಿಸಿರುವುದನ್ನು ಆಂಬುಲೆನ್ಸ್ ನಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಪಾರ್ಕಿಂಗ್ ಲೈಟ್ ಹಾಕುತ್ತಾ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಪದೇ ಪದೇ ಅಡ್ಡಿಪಡಿಸುತ್ತಾ ತೆರಳುತ್ತಿದ್ದ ಕಾರಿನಲ್ಲಿ ಇಬ್ಬರು ಯುವಕರು ಇದ್ದರು ಎಂದು ಅಯ್ಯೂಬ್ ತಿಳಿಸಿದ್ದಾರೆ.

ಸುಮಾರು 30 ಕಿಲೋ ಮೀಟರ್ ತನಕವೂ ತನ್ನ ಹುಚ್ಚಾಟ ತೋರಿದ ಯುವಕರು, ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ.

ಅದಾಗ್ಯೂ. ಐಸಿಯು ಆಂಬುಲೆನ್ಸ್ ನಲ್ಲಿ ವೆಂಟಿಲೇಟರ್ ನಲ್ಲಿದ್ದ ರೋಗಿಯನ್ನು 1 ಗಂಟೆ 40 ನಿಮಿಷದಲ್ಲಿ ಭಟ್ಕಳಕ್ಕೆ ತಲುಪಿಸುವಲ್ಲಿ ಆಂಬುಲೆನ್ಸ್ ಚಾಲಕ ಯಶಸ್ವಿಯಾಗಿದ್ದಾರೆ. “ಕಾರು ಚಾಲಕ ಉದ್ಧಟತನ ತೋರುತ್ತಿದ್ದರೂ ರೋಗಿ ಹಾಗೂ ಅವರ ಕುಟುಂಬಿಕರ ಸುರಕ್ಷತೆ ದೃಷ್ಟಿಯಿಂದ ಆಂಬುಲೆನ್ಸ್ ಅನ್ನು ಜಾಗರೂಕವಾಗಿಯೇ ಚಲಾಯಿಸಬೇಕಿರುವುದು ನಮ್ಮ ಕರ್ತವ್ಯ” ಎಂದು ಆಂಬುಲೆನ್ಸ್ ಚಾಲಕ ಅಯ್ಯೂಬ್ ತಿಳಿಸಿದ್ದಾರೆ. 

ಈ ಘಟನೆ ನಿನ್ನೆ ಸಾಯಂಕಾಲ ವೇಳೆಗೆ ನಡೆದರೆ, ತಡರಾತ್ರಿ ಉಡುಪಿಯ ಇನ್ನೊಂದು ಖಾಸಗಿ ಆಂಬುಲೆನ್ಸ್ ಚಾಲಕರಿಗೂ ಇದೇ ಕಾರು ಅಡ್ಡಿಪಡಿಸಿತ್ತು ಎಂದು ನಗರದ ಮತ್ತೋರ್ವ ಆಂಬುಲೆನ್ಸ್ ಚಾಲಕ ಆರೋಪಿಸಿದ್ದಾರೆ. ಅಲ್ಲದೇ, ಇಂತಹ ಉದ್ಧಟತನದ ವಿರುದ್ಧ ಕ್ರಮಕ್ಕೆ ಆಂಬುಲೆನ್ಸ್ ಚಾಲಕರು ಒತ್ತಾಯಿಸಿದ್ದಾರೆ.

Join Whatsapp