ಮಂಗಳೂರು: ಬೂಸ್ಟರ್ ಡೋಸ್ ಗೆ ಚಾಲನೆ

Prasthutha|

ಮಂಗಳೂರು: ಕೋವಿಡ್ 3 ನೇ ಅಲೆಯ ಭೀತಿಯ ನಡುವೆ ಮಂಗಳೂರಿನಲ್ಲಿ ಬೂಸ್ಟರ್ ಡೋಸ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ 52,529 ಆರೋಗ್ಯ ಕಾರ್ಯಕರ್ತರು, 15,924 ಮಂಚೂಣಿ ಕಾರ್ಯಕರ್ತರು ಹಾಗೂ 2,69,000 ಅರವತ್ತು ವರ್ಷ ಮೇಲ್ಪಟ್ಟವರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 3,37,447 ಅರ್ಹ ಫಲಾನುಭವಿಗಳ ಪೈಕಿ 40 ಸಾವಿರ ಜನರಿಗೆ ಸೋಮವಾರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ತಿಳಿಸಿದ್ದಾರೆ.

- Advertisement -

ಅವರು ಜ.10ರ ಸೋಮವಾರ ನಗರದ ವೆನ್ ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಕೋವಿಡ್ ನ ಬೂಸ್ಟರ್ ಡೋಸ್ ನೀಡಿಕೆಯಲ್ಲಿ ಉಪಸ್ಥಿತರಿದ್ದು, ಡೋಸ್ ಪಡೆದವರಿಗೆ ಶುಭಹಾರೈಸಿ ಮಾತನಾಡಿದರು.

ಅರ್ಹ ಫಲಾನುಭವಿಗಳು ಬೇಗನೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಸರ್ಕಾರದಿಂದ ಈಗಾಗಲೇ ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಆರೋಗ್ಯ ಹಾಗೂ ಜೀವರಕ್ಷಣೆ ಇದರಿಂದ ಸಾಧ್ಯವಾಗಲಿದೆ. ಕೋವಿಡ್ ಸೋಂಕಿನ ನಿಯಂತ್ರಣದ ಹಿತ ದೃಷ್ಟಿಯಿಂದ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು. ಕೋವಿಡ್ ಕುರಿತಂತೆ ನಾಗರೀಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಮುಖ್ಯವಾಗಿ ಅಜಾಗರೂಕರಾಗಿರಬಾರದು ಎಂದು ಅವರು ತಿಳಿಸಿದರು.

- Advertisement -

ಲಾಕ್ಡೌನ್ ಗೆ ಸಂಬಂಧಿಸಿದಂತೆ ಜನರಲ್ಲಿ ಗೊಂದಲಗಳಿದ್ದು, ಸೋಂಕು ನಿಯಂತ್ರಿಸುವಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದಲ್ಲಿ ಅನುಕೂಲ ಎಂಬ ಕಾರಣದಿಂದ ವಾರಂತ್ಯ ಕಫ್ರ್ಯೂ ವಿಧಿಸಲಾಗಿದೆ. ಜನ ಎಚ್ಚರಿಕೆ ವಹಿಸಿದರೆ ಲಾಕ್ಡೌನ್ ಹೇರುವ ಪ್ರಮೇಯ ಉದ್ಬವಿಸುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮೇಯರ್ ಪ್ರೇಮಾನಂದ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Join Whatsapp