ತೌಕ್ತೆ ಚಂಡಮಾರುತ ಅಲೆಗಳ ರಬಸಕ್ಕೆ ಸಮುದ್ರದಲ್ಲಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿ ಟಗ್ ನಲ್ಲಿದ್ದ 9 ಮಂದಿ ಸಿಬ್ಬಂದಿಗಳನ್ನು ಕರಾವಳಿ ಕಾವಲು ಪಡೆ, ಸ್ಥಳೀಯ ಪೊಲೀಸರೊಂದಿಗೆ ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಜಂಟಿ ರಕ್ಷಣಾ ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ.
ಕೊಚ್ಚಿನ್ ನಿಂದ ಆಗಮಿಸಿರುವ ನೌಕಾ ಪಡೆಯ ಹೆಲಿಕಾಪ್ಟರ್, ಮಂಗಳೂರಿಗೆ ತಲುಪಿ ನಂತರ ಟಗ್ ಸಿಲುಕಿರುವ ಕಾಪುವಿನತ್ತ ತೆರಳಿ ಕಾರ್ಯಾಚರಣೆ ನಡೆಸಿ ಎಲ್ಲಾ ಸಿಬ್ಬಂದಿಗಳನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದೆ.
ಈ ಸಂದರ್ಭದಲ್ಲಿ ಸಂಸದದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರೊಂದಿಗೆ ಕೋಸ್ಟಲ್ ಗಾರ್ಡ್ ಡಿ. ಐ.ಜಿ ಎಸ್.ಬಿ. ವೆಂಕಟೇಶ್ ಅವರನ್ನು ಭೇಟಿ ಮಾಡಿ ಸಮುದ್ರದ ಪ್ರಕ್ಷುಬ್ಧತೆಯಿಂದ ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ ಟಗ್ ನಲ್ಲಿರುವ ಜನರ ರಕ್ಷಣೆಯ ಕುರಿತು ಚರ್ಚಿಸಿ, ಕಾರ್ಯಾಚರಣೆಯ ಎಲ್ಲಾ ಹಂತಗಳ ಮಾಹಿತಿ ಪಡೆದರು.
ಮೊದಲ ಹಂತದಲ್ಲಿ ಐವರನ್ನು, ಆ ಬಳಿಕ 4 ಜನರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಿ ಎಲ್ಲರನ್ನು ಯಶಸ್ವಿಯಾಗಿ ರಕ್ಷಿಸಿದೆ ಎಂದು ಮಾಹಿತಿ ನೀಡಿದ್ದಾರೆ.