ಜನಹಿತದ ಲಾಕ್ ಡೌನ್ ನತ್ತ ಗಮನ ಹರಿಸಿ : ಕುಮಾರಸ್ವಾಮಿ ಸಲಹೆ

Prasthutha|

ಲಾಕ್ ಡೌನ್ ಜನರ ಜೀವ ಉಳಿಸುವ ಕ್ರಮ ಹೌದು. ಆದರೆ, ಈ ಲಾಕ್ ಡೌನ್ ಜನರ ಬದುಕನ್ನು ಹೈರಾಣಾಗಿಸುತ್ತಿದೆ ಎಂಬುದೂ ನಮಗೆಲ್ಲರಿಗೂ ಅರಿವಿಗೆ ಬಂದಿರುವ ವಿಚಾರ. ಹೀಗಾಗಿಯೇ ನಾವು ಸೂಚಿಸುತ್ತಿರುವ ಜನಹಿತದ ಲಾಕ್ ಡೌನ್ ಮಾಡುವುದರತ್ತ ಸರ್ಕಾರ ಆದ್ಯತೆ ನೀಡಬೇಕು. ಜನರ ಜೀವ ಉಳಿಸುತ್ತಲೇ, ಜೀವನಕ್ಕೂ ನೆರವಾಗುವುದು ಜನಪರ ಸರ್ಕಾರವೊಂದರ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್ ಡೌನ್ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರ ಜನರ ಕೈಬಿಟ್ಟಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷಿಸಬಾರದು. ಅವರ ಅಗತ್ಯಗಳನ್ನು ಪೂರೈಸುವುದರತ್ತ ರಾಜ್ಯ ಗಮನಹರಿಸಬೇಕು. ಲಾಕ್ ಡೌನ್ ನಲ್ಲಿ ಪರಿಹಾರ ಕ್ರಮಗಳು ಇರಬೇಕು ಎಂದು ಆಗ್ರಹಿಸಿದ್ದಾರೆ.

ನೆರೆಯ ರಾಜ್ಯಗಳಲ್ಲಿ ಲಾಕ್ ಡೌನ್ ಹೇಗಿದೆ, ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಒಂದು ಬಾರಿ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್ ಡೌನ್ ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಪರಿಹಾರ ಅಗತ್ಯ.

- Advertisement -

ಸರ್ಕಾರ ಲಾಕ್ ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದೆ. ಲಾಕ್ ಡೌನ್ ವಿಸ್ತರಿಸುವುದೇ ಆದರೆ, ಅದು ‘ಜನಹಿತದ ಲಾಕ್ ಡೌನ್’ ಆಗಿರಲಿ. ಆರ್ಥಿಕ,ಆಹಾರ ಪ್ಯಾಕೇಜ್, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್ ಡೌನ್ ನಲ್ಲಿರಲಿ. ಸರ್ವಪಕ್ಷಗಳ ಸಭೆಯಲ್ಲಿ ನಾವು ಸೂಚಿಸಿದ್ದೂ ‘ಜನಹಿತದ ಲಾಕ್ ಡೌನ್’ ಕಲ್ಪನೆಯೇ ಆಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Join Whatsapp