ಫುಟ್‌ಬಾಲ್‌| ಮ್ಯಾಂಚೆಸ್ಟರ್‌ ಸಿಟಿ ತಂಡದ ವಿರುದ್ಧ 6-3 ಅಂತರದಲ್ಲಿ ಸೋತ ಯುನೈಟೆಡ್‌ 

Prasthutha|

​​​​​​​ ಮ್ಯಾಂಚೆಸ್ಟರ್‌: ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾನುವಾರ ನಡೆದʻ ಡರ್ಬಿʼ ಕದನದಲ್ಲಿ ಆತಿಥೇಯ ಮ್ಯಾಂಚೆಸ್ಟರ್‌ ಸಿಟಿ ತಂಡ, ಬದ್ಧ ಎದುರಾಳಿ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು 6-3 ಗೋಲುಗಳ ಅಂತರದಲ್ಲಿ ಬಗ್ಗುಬಡಿದಿದೆ.

- Advertisement -

ಸಿಟಿ ತಂಡದ ತವರು ಮೈದಾನ ಎತ್ತಿಹಾದ್‌ನಲ್ಲಿ ನಡೆದ 28ನೇ ಡರ್ಬಿ ಕದನದಲ್ಲಿ ಮುನ್ನಡೆ ಆಟಗಾರರಾದ ಫಿಲ್‌ ಫೋಡೆನ್‌ ಮತ್ತು ಎರ್ಲಿಂಗ್‌ ಹಾಲೆಂಡ್‌ ಹ್ಯಾಟ್ರಿಕ್‌ ಗೋಲು ದಾಖಲಿಸುವ ಮೂಲಕ ಯುನೈಟೆಡ್‌ ರಕ್ಷಣಾ ವಿಭಾಗವನ್ನು ನುಚ್ಚುನೂರು ಮಾಡಿದ್ದರು. ಎತ್ತಿಹಾದ್‌ ಮೈದಾನದಲ್ಲಿ ಸತತ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಪ್ರೀಮಿಯರ್ ಲೀಗ್ ಕೂಟದ ಮೊದಲ ಆಟಗಾರ ಎಂಬ ದಾಖಲೆಯೂ ಹಾಲೆಂಡ್‌ ಪಾಲಾಗಿದೆ.

ಪಂದ್ಯದ ಅರಂಭದಿಂದಲೇ ಪೆಪ್‌ ಗಾರ್ಡಿಯೋಲ ಬಳಗ ಮುನ್ನಡೆ ಸಾಧಿಸುತ್ತಲೇ ಸಾಗಿತ್ತು. 8 ಮತ್ತು44ನೇ ನಿಮಿಷದಲ್ಲಿ ಫಿಲ್‌ ಫೋಡೆನ್‌, 34 ಮತ್ತು 37 ನಿಮಿಷದಲ್ಲಿ ಹಾಲೆಂಡ್‌ ಗೋಲು ದಾಖಲಿಸುವ ಮೂಲಕ ಮೊದಲಾರ್ಧದ ಅಂತ್ಯಕ್ಕೆ ಸಿಟಿ 4-0 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು.

- Advertisement -

ದ್ವಿತಿಯಾರ್ಧದ 56ನೇ ನಿಮಿಷದಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಂಟನಿ ಗೋಲಿನ ಖಾತೆ ತೆರೆದರು. ಆದರೆ 64ನೇ ನಿಮಿಷದಲ್ಲಿ ಹಾಲೆಂಡ್‌ ಮತ್ತು 72 ನಿಮಿಷದಲ್ಲಿ ಗೋಲು ದಾಖಲಿಸಿದ ಫೋಡೆನ್‌ ತಂಡದ ಮುನ್ನಡೆಯನ್ನು 6ಕ್ಕೇರಿಸಿದ್ದರು. ಹೀನಾಯ ಸೋಲು ತಪ್ಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ಯುನೈಟೆಡ್‌, 84ನೇ ಮತ್ತು ಹೆಚ್ಚುವರಿ ಅವಧಿಯಲ್ಲಿ (90+1) ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶದಿಂದ ಗೋಲು ದಾಖಲಿಸಿ ಹಿನ್ನಡೆಯನ್ನು 6-3ಕ್ಕೆ ತಗ್ಗಸಿದರು.

ಈ ಜಯದೊಂದೊಗೆ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿಯಲ್ಲಿ ಮ್ಯಾಂಚೆಸ್ಟರ್‌ ಸಿಟಿ ತಂಡ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನಾಡಿರುವ ಸಿಟಿ, 6 ಗೆಲುವು ಮತ್ತು 2 ಡ್ರಾ ಸಾಧಿಸುವುದರೊಂದಿಗೆ 20 ಅಂಕಗಳನ್ನು ಹೊಂದಿದೆ. 8 ಪಂದ್ಯಗಳಲ್ಲಿ 7 ಗೆಲುವು, 1 ಡ್ರಾ ಸಾಧಿಸಿರುವ ಆರ್ಸನಲ್‌ 21 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 17 ಅಂಕಗಳೊಂದಿಗೆ ಟೊಟೆನ್‌ಹ್ಯಾಮ್‌ ಮೂರನೇ ಸ್ಥಾನದಲ್ಲಿದೆ.



Join Whatsapp