ಅಯೋಧ್ಯೆಯಲ್ಲಿ ಪತ್ನಿಗೆ ಮುತ್ತಿಟ್ಟ ಪತಿಗೆ ಗುಂಪು ಹಲ್ಲೆ: ನೆಟ್ಟಿಗರಿಂದ ಆಕ್ರೋಶ

Prasthutha|

ಲಕ್ನೋ: ಅಯೋಧ್ಯೆಯಲ್ಲಿ ಸರಯೂ ನದಿಯ ದಂಡೆಯಲ್ಲಿರುವ ಘಾಟ್ ಗಳ ಸರಣಿ ರಾಮ್ ಕಿ ಪೈಡಿಯಲ್ಲಿ ಸ್ನಾನ ಮಾಡುವಾಗ  ಪತ್ನಿಗೆ ಮುತ್ತಿಟ್ಟ ವ್ಯಕ್ತಿಗೆ ಗುಂಪೊಂದು ಥಳಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಪತ್ನಿಯನ್ನು ಸಾರ್ವಜನಿಕವಾಗಿ ಚುಂಬಿಸುವುದು ತಪ್ಪೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

- Advertisement -

ವಿಡಿಯೋವನ್ನು ಅಶೋಕ್ ಸ್ವೈನ್ ಎಂಬುವರು ಶೇರ್ ಮಾಡಿಕೊಂಡಿದ್ದು, ಈ ವ್ಯಕ್ತಿ ತನ್ನ ಪತ್ನಿಗೆ ಮುತ್ತು ನೀಡಿ ತಪ್ಪು ಮಾಡಿಬಿಟ್ಟ.ಆಯೋಧ್ಯೆಯಂತಹ ಪವಿತ್ರ ಸ್ಥಳದಲ್ಲಿ  ಮುತ್ತಿಡುವುದು ಭಾರತೀಯ ಸಂಸ್ಕೃತಿಯಲ್ಲವಂತೆ. ಆದರೆ, ಗುಂಪು ಹಲ್ಲೆ ಸಂಸ್ಕೃತಿಯಲ್ಲಿ ಒಂದಂತೆ ಎಂದು ಅವರು ಹಲ್ಲೆ ನಡೆಸಿದ ಯುವಕ ನಡೆಯನ್ನು ಟೀಕಿಸಿದ್ದಾರೆ.

ಘಾಟ್ ನಲ್ಲಿ ಸ್ನಾನ ಮಾಡುತ್ತಿದ್ದ ದಂಪತಿ ಪರಸ್ಪರ ಚುಂಬಿಸುವುದನ್ನು ನೋಡಿದ ವ್ಯಕ್ತಿಯೊಬ್ಬ ಮಹಿಳೆಯ ಗಂಡನನ್ನು ಎಳೆದುಕೊಂಡು ಹೊಡೆಯಲು ಆರಂಭಿಸುತ್ತಾನೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಸೇರಿ ಆತನ ಮೇಲೆ ಹಲ್ಲೆ ಮಾಡುವಾಗ ತನ್ನ ಪತಿಯ ಮೇಲೆ ಹಲ್ಲೆ ಮಾಡದಂತೆ ಪತ್ನಿ ತಡೆಯಲು ಯತ್ನಿಸುತ್ತಾಳೆ. ಇಬ್ಬರನ್ನು ನೀರಿನಿಂದ ಹೊರಗೆಳೆದು ಮಹಿಳೆಯ ಗಂಡನನ್ನು ಸುತ್ತುವರಿದು ಹಲ್ಲೆ ಮಾಡುತ್ತಾರೆ. ಇದಿಷ್ಟನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.

- Advertisement -

ಸದ್ಯ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ 1 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಘಟನೆಯ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಶೈಲೇಶ್ ಪಾಂಡೆ, ಈ ವಿಡಿಯೋ ಒಂದು ವಾರ ಹಳೆಯದಾಗಿದೆ ಮತ್ತು ಈ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಈಗ ದಂಪತಿ ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಲು ಬಯಸಿದರೆ ಅವರು ದೂರು ದಾಖಲಿಸಬಹುದು ಎಂದಿದ್ದಾರೆ.



Join Whatsapp