ಜೈಪುರ್: ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯೊಬ್ಬನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿ ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಆರೋಪಿ ಪ್ರಮೋದ್ ಕುಮಾರ್ (38) ಎಂಬಾತನನ್ನು ಬಂಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಆರೋಪಿಯನ್ನು ಭಲೇರಿ ಪೊಲೀಸ್ ಠಾಣೆಯಿಂದ ಚುರುವಿನ ತಾರಾ ನಗರದ ನ್ಯಾಯಾಲಯಕ್ಕೆ ಬಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ಬುಚವಾಸ್ ಬಳಿ ವಾಹನದ ಹಿಂದಿನ ಬಾಗಿಲಿನಿಂದ ಜಿಗಿದು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ನಗರದ ಆಸ್ಪತ್ರೆಗೆ ಸಾಗಿಸಿದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಬಿಕಾನೇರ್ ವಲಯದ ಇನ್ಸ್ಪೆಕ್ಟರ್ ಜನರಲ್ ಓಂಪ್ರಕಾಶ್ ತಿಳಿಸಿದ್ದಾರೆ.
ಈ ಸಂಬಂಧ ಅವರ ಕಾವಲಿಗಿದ್ದ ಚುರುವಿನ ಭಲೇರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕೇದರ್ಮಲ್ , ಕಾನ್ ಸ್ಟೆಬಲ್ ಗಳಾದ ಸತ್ವೀರ್ ಪೂನಿಯಾ ಮತ್ತು ಭೈರೋ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.
ಮೂವರು ಪೊಲೀಸರನ್ನು ಅಮಾನತುಗೊಳಿಸಿದ ನಂತರವೇ ಕುಮಾರ್ ಅವರ ಮೃತದೇಹವನ್ನು ಸ್ವೀಕರಿಸಲು ಅವರ ಕುಟುಂಬ ಸದಸ್ಯರು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಮಾರ್ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಹಾಗೂ ಈ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಓಂಪ್ರಕಾಶ್ ತಿಳಿಸಿದ್ದಾರೆ.