ನಿಯಮ ಮೀರಿ ವ್ಯಕ್ತಿಯ ಬಂಧನ: ಸಬ್ ಇನ್ ಸ್ಪೆಕ್ಟರ್ ಗೆ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

Prasthutha|

- Advertisement -

ಹೊಸದಿಲ್ಲಿ : ಸುಪ್ರೀಂ ಕೋರ್ಟ್ ವಿಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಕ್ತಿಯೋರ್ವನನ್ನು ಬಂಧಿಸಿರುವುದಕ್ಕೆ ಸಂಬಂಧಿಸಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಓರ್ವರಿಗೆ ಒಂದು ದಿನ ಜೈಲು ಶಿಕ್ಷೆ ವಿಧಿಸುವ ಮೂಲಕ ದಿಲ್ಲಿ ಉಚ್ಚ ನ್ಯಾಯಾಲಯ ಅಪರೂಪದ ತೀರ್ಪು ನೀಡಿದೆ. ವಿಶ್ವಾಸ ದ್ರೋಹದ ಆರೋಪಕ್ಕೆ ಸಂಬಂಧಿಸಿ ದಿಲ್ಲಿಯ ಮೌರ್ಯ ಎಂಕ್ಲೇವ್ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಕುಲದೀಪ್ ಅವರು ಆರೋಪಿ ರಾಕೇಶ್ ಕುಮಾರ್ ಎಂಬಾತನನ್ನು 2020 ಆಗಸ್ಟ್ 23ರಂದು ಬಂಧಿಸಿದ್ದರು.

11 ದಿನಗಳ ಕಾಲ ಜೈಲಿನಲ್ಲಿದ್ದ ರಾಕೇಶ್ ಕುಮಾರ್ ಅನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಆದರೆ, ಇದರ ವಿರುದ್ಧ ರಾಕೇಶ್ ಕುಮಾರ್ ಅವರು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ತನ್ನ ಬಂಧನ ಅರ್ನೇಶ್ ಕುಮಾರ್ ವರ್ಸಸ್ ಬಿಹಾರ್ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ಮನವಿಯಲ್ಲಿ ಪ್ರತಿಪಾದಿಸಿದ್ದರು. ನ್ಯಾಯಮೂರ್ತಿ ನಝ್ಮಿ ವಝಿರಿ ತನ್ನ ಆದೇಶದಲ್ಲಿ, ಈ ಬಂಧನದಿಂದ ದೂರುದಾರ ಮಾತ್ರ ಅವಮಾನ, ಅಗೌರವಕ್ಕೆ ಒಳಗಾಗಿರುವುದು ಅಲ್ಲ. ಅವರ ಕುಟುಂಬ ಕೂಡ ಕೂಡ ಅವಮಾನ, ಅಗೌರವಕ್ಕೆ ಒಳಗಾಗಿದೆ ಎಂದಿದ್ದಾರೆ.

- Advertisement -

ನ್ಯಾಯಾಧೀಶರು ಪೊಲೀಸ್ ಅಧಿಕಾರಿಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿರುವುದೇ ಅಲ್ಲದೆ, 2 ಸಾವಿರ ರೂ. ದಂಡವನ್ನೂ ವಿಧಿಸಿದ್ದಾರೆ. ಅಲ್ಲದೆ, ಕಾನೂನು ಪ್ರಕ್ರಿಯೆಯ ವೆಚ್ಚವಾಗಿ ರಾಕೇಶ್ ಕುಮಾರ್ ಅವರಿಗೆ 15 ಸಾವಿರ ರೂ. ಪಾವತಿಸುವಂತೆ ಆದೇಶ ನೀಡಿದ್ದಾರೆ.

Join Whatsapp