ಕೇಂದ್ರ ರಕ್ಷಣಾ ಪಡೆಗಳಿಂದ ಮತದಾರರಿಗೆ ನಿರ್ಬಂಧ| ಮತದಾನ ಕೇಂದ್ರದಲ್ಲೇ ಮಮತಾ ಬ್ಯಾನರ್ಜಿ ಪ್ರತಿಭಟನೆ

Prasthutha|

ಎರಡನೇ ಹಂತದ ಮತದಾನದ ಸಂದರ್ಭದಲ್ಲೂ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಯೋಧರು ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಂಗಾಳ ಮುಖ್ಯಮಂತ್ರಿ ಮಮತಾ ನಂದಿಗ್ರಾಮ್‌ನ ಮತದಾನ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಬಿಜೆಪಿಯ ಅಣತಿಯಂತೆ ಹೊರಗಿನಿಂದ ಬಂದ ಜನರು ಹಿಂಸಾಚಾರ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮಮತಾ ಬ್ಯಾನರ್ಜಿ ರಾಜ್ಯಪಾಲರಿಗೆ ಕರೆ ಮಾಡಿ ವಿನಂತಿಸಿದ್ದಾರೆ. ಈ ಕುರಿತು ತಾನು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಮಮತಾ ಬ್ಯಾನರ್ಜಿ ಹೇಳಿದರು. “ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾವು ಮಧ್ಯಪ್ರವೇಶಿಸಬೇಕಾಗಿದೆ” ಎಂದು ಮಮತಾ ಬ್ಯಾನರ್ಜಿ ರಾಜ್ಯಪಾಲ ಜೈದೀಪ್ ಧಂಕರ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ತೃಣಮೂಲ ಸಂಸದ ಡೆರೆಕ್ ಒ’ಬ್ರಿಯೆನ್ ಕೂಡ ಬಿಜೆಪಿ ಕಾರ್ಯಕರ್ತರು ಚುನಾವಣಾ ಕೇಂದ್ರವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮತದಾನ ಮುಂದುವರೆದಂತೆ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹತ್ಯೆಯಾಗಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನ ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

Join Whatsapp