ಭವಾನಿಪೋರ್‌ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

Prasthutha|

ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿಯವರು ಕೂದಲೆಳೆ ಅಂತರದಿಂದ ನಂದಿಗ್ರಾಮದಲ್ಲಿ ಸೋಲನುಭವಿಸಿದ್ದರು. ಹೀಗಾಗಿ ಅವರು ಸಿಎಂ ಪದವಿಯಲ್ಲಿರುವುದರಿಂದ ಆರು ತಿಂಗಳೊಳಗೆ ವಿಧಾನಸಭೆಗೆ ಆರಿಸಿಬರಬೇಕಾಗಿದೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಮೊದಲಿನ ಕ್ಷೇತ್ರ ಭವಾನಿಪೋರ್‌ನಿಂದ ಕಣಕ್ಕಿಳಿಯುವುದು ನಿಶ್ಚಿತವಾಗಿದೆ.

- Advertisement -


ಕೋಲ್ಕತ್ತಾದ ಭವಾನಿಪೋರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಮತಾ ಬ್ಯಾನರ್ಜಿಯವರು ತಮ್ಮ ಸುರಕ್ಷಿತ ಸ್ಥಾನವನ್ನು ತೆರವುಗೊಳಿಸಿ ಕಠಿಣ ನಂದಿಗ್ರಾಮದಲ್ಲಿ ಸ್ಪರ್ಧಿಸುವುದಾಗಿ ಮತ್ತು ಅದೊಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಮಾರ್ಚ್ 5 ರಂದು ಘೋಷಿಸಿದ್ದರು. ಈ ಹಿಂದೆ ಟಿಎಂಸಿಯ ಪ್ರಭಾವಿ ನಾಯಕನಾಗಿದ್ದ ಮತ್ತು ಈಗ ಬಿಜೆಪಿಗೆ ಸೇರಿರುವ ಸುವೇಂಧು ಅಧಿಕಾರಿ ತಮ್ಮ ಪ್ರಬಲ ನೆಲೆಯಾದ ನಂದಿಗ್ರಾಮದಲ್ಲಿ ಕೇವಲ ಎರಡು ಸಾವಿರ ಮತಗಳ ಅಂತರದಲ್ಲಿ ವಿಜಯಿಯಾಗಿದ್ದರು.

ಮಮತಾ ಬ್ಯಾನರ್ಜಿಯವರ ತೆರವಿನಿಂದಾಗಿ ಭವಾನಿಪೋರ್ ಕ್ಷೇತ್ರದಲ್ಲಿ ಟಿಎಂಸಿ ಸೋವಾಂಡೇಬ್ ಚಟ್ಟೋಪಾಧ್ಯಾಯ್ ಸ್ಪರ್ಧಿಸಿ ಜಯ ಗಳಿಸಿದ್ದರು. ಇಂದು ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವು ಮೂಲಕ ಮತ್ತೆ ಮಮತಾ ಬ್ಯಾನರ್ಜಿಯವರಿಗೆ ಆ ಕ್ಷೇತ್ರ ನೀಡಲು ಮುಂದಾಗಿದ್ದಾರೆ.
ವಿಧಾನಸಭಾ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯರಿಗೆ ರಾಜೀನಾಮೆ ಸಲ್ಲಿಸುವ ಮುನ್ನ ಮಾದ್ಯಮದವರೊಂದಿಗೆ ಮಾತನಾಡಿದ ಅವರು “ಇನ್ನು ಆರು ತಿಂಗಳಲ್ಲಿ ಭವಾನಿಪೋರ್ ಕ್ಷೇತ್ರದಿಂದ ಮಮತಾಬ್ಯಾನರ್ಜಿಯವರು ಸ್ಪರ್ಧಿಸಲಿದ್ದಾರೆ” ಎಂದು ತಿಳಿಸಿದ್ದಾರೆ.

Join Whatsapp