RSS ನವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು, ಅವರ ವಿರುದ್ಧ ಹೋರಾಟ ನಿರಂತರ: ಮಲ್ಲಿಕಾರ್ಜುನ ಖರ್ಗೆ

Prasthutha|

ಬೆಂಗಳೂರು: ಆರ್ ಎಸ್ ಎಸ್ ನವರು ಮೇಲು-ಕೀಳು ಪ್ರತಿಪಾದಿಸುವ ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು. ಇವರ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಬಡವರ ಪರ ಅಲ್ಲ, ಸಮಾಜವಾದದ ಪರ ಅಲ್ಲ. ಮನು ಸ್ಮೃತಿಯನ್ನು ಪೋಷಿಸುವ ಆರ್ ಎಸ್ ಎಸ್ ನಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಅವರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

- Advertisement -


ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ರೈತರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಘಟನೆ ಸಂಬಂಧ ಸುಳ್ಳು ಹೇಳಿಕೆ ನೀಡುತ್ತಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.


ದೇಶದಲ್ಲಿ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಲಾಗುತ್ತಿದೆ. ಇದೇ ರೀತಿ ಬೆಳವಣಿಗೆ ಮುಂದುವರಿದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಿನ್ನೆ ಉತ್ತರ ಪ್ರದೇಶದಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರೂ ಕನಿಷ್ಠ ರೈತರ ಸಾವಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬದಲಾಗಿ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಆ ಮೇಲೆ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಎಂದು ದೂರಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

- Advertisement -

ಬಾಯಲ್ಲಿ ರಾಮಜಪ ಬಗಲಲ್ಲಿ ಚೂರಿ ಹಿಡಿದು ಖಾವಿ ಧರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆ ಸ್ಥಾನದಲ್ಲಿ ಮುಂದುವರಿಯಲು ಲಾಯಕ್ಕಿಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಖರ್ಗೆ, ಹತ್ರಾಸ್ ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಪ್ರಚೋದನೆ ನೀಡಿದ್ದರು. ಕೆಟ್ಟ ವ್ಯವಸ್ಥೆಗೆ ಪ್ರಚೋದನೆ ನೀಡುವವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಬಾರದು. ಪವಿತ್ರ ಖಾವಿ ಬಟ್ಟೆಗೆ ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.


ರೈತರ ಮೇಲೆ ಕಾರು ಹಾರಿಸಿ ಹತ್ಯೆ ಮಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರ ಸೇರಿದಂತೆ ಅರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಅವರು, ಸುಖಾ ಸುಮ್ಮನೆ ದೇಶ ದ್ರೋಹದ ಪ್ರಕರಣಗಳನ್ನು ಹಾಕುವುದಲ್ಲ. ಇಂತವರ ಮೇಲೆ ತಾಕತ್ತಿದ್ದರೆ ಹಾಕಿ ಎಂದು ಸವಾಲು ಹಾಕಿದರು.


ಬಿಜೆಪಿ ತಾನು ಮಾಡುವ ತಪ್ಪುಗಳನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿ ರಾಜಕಾರಣ ಮಾಡಲು ಹೊರಟಿದೆ ಎಂದು ದೂರಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಒಳಸಂಚು ಮಾಡುತ್ತಿದೆ ಎಂದು ದೂರಿದರು. ಲಖೀಂಪುರ ಖೇರಿಯಲ್ಲಿ ಹಿಂಸಾಚಾರದಲ್ಲಿ ಬಲಿಯಾದ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಯಾವುದೇ ವಾರೆಂಟ್ ಇಲ್ಲದೆ ಬಂಧಿಸಲಾಗಿದೆ. ಇದು ಅಪರಾಧ ಎಂದು ಖರ್ಗೆ ಕಿಡಿಕಾರಿದರು.


ಪ್ರಿಯಾಂಕ ಗಾಂಧಿ ಅವರನ್ನುಅಕ್ರಮ ಬಂಧನದಲ್ಲಿಟ್ಟು 40 ಗಂಟೆ ಕಳೆದಿದೆ. ಸರ್ಕಾರ ಯಾವುದೇ ಉತ್ತರ ನೀಡಿಲ್ಲ. ಜೊತೆಗೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ತುಟಿಕ್ ಪಿಟಿಕ್ ಎಂದಿಲ್ಲ ಎಂದು ದೂರಿದರು.

Join Whatsapp