ಬೆಂಗಳೂರು: ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, 20 ಐಸಿಯು ಹಾಸಿಗೆಗಳನ್ನು ಇನ್ನೂ ಸೇವೆಗೆ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು, 80 ಹಾಸಿಗೆಗಳು ಬಳಕೆಯಲ್ಲಿವೆ. ಇನ್ನೂ 20 ಹಾಸಿಗೆಗಳನ್ನು ಐಸಿಯುಗೆ ಮೀಸಲಿಡಲಾಗಿದೆ. ಆದರೆ ಈ ಹಾಸಿಗೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡುವುದು ಸೇರಿದಂತೆ ಹಲವು ಎಲೆಕ್ಟ್ರಿಕ್ ಕಾರ್ಯ ಪ್ರಗತಿಯಲ್ಲಿದೆ. ಇದು ಏಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದ ಸಚಿವರು, ಶೀಘ್ರದಲ್ಲಿ ರೋಗಿಗಳ ಸೇವೆಗೆ ಈ ಹಾಸಿಗೆಗಳನ್ನು ಸಿದ್ಧಪಡಿಸಿಕೊಡಬೇಕು ಎಂದು ಖಡಕ್ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವನಹಳ್ಳಿ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಸದ್ಯ 80 ಹಾಸಿಗೆಗಳು ಬಳಕೆಯಲ್ಲಿವೆ. ಇನ್ನೂ 20 ಹಾಸಿಗೆಗಳನ್ನು ಐಸಿಯುಗಾಗಿ ಮೀಸಲಿಟ್ಟಿದ್ದು, ಕೆಲ ಎಲೆಕ್ಟ್ರಿಕ್ ಕಾರ್ಯ ನಡೆಯುತ್ತಿದೆ. ಇದು ಯಾಕೆ ತಡವಾಗುತ್ತಿದೆ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಶೀಘ್ರದಲ್ಲಿ ಈ ಹಾಸಿಗೆಗಳನ್ನು ರೋಗಿಗಳ ಸೇವೆಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಯಾವ ವಾರ್ಡ್ ಯಾವುದಕ್ಕೆ ಮೀಸಲಿಡಬೇಕು ಹಾಗೂ ಆಯಾ ರೋಗಿಗಳೇ ಆ ವಾರ್ಡ್ಗಳಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ. ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಬೇಕು ಎಂದೂ ಸೂಚಿಸಲಾಗಿದೆ. ರಕ್ತ ಪರೀಕ್ಷೆಗೆ ಬರುವವರ ದಾಖಲೆಗಳನ್ನು ಸರಿಯಾಗಿ ಇರಿಸಿಕೊಳ್ಳಬೇಕು ಹಾಗೂ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ ದಾಖಲೆ ಮಾಡಬೇಕು ಎಂದು ಸೂಚಿಸಲಾಗಿದೆ. ತಾಲೂಕಿನಲ್ಲಿ ಎಷ್ಟು ಜನರಿಗೆ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಇದೆ ಎಂಬುದನ್ನು ದಾಖಲೆಯಾಗಿ ಇರಿಸಬೇಕು ಎಂದು ಹೇಳಲಾಗಿದೆ. ಪ್ರತಿ ತಿಂಗಳು ಅದನ್ನು ದಾಖಲಿಸಬೇಕಿದೆ ಎಂದರು.
ಹಿಂದೆ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಇರಲಿಲ್ಲ. ಅದನ್ನು ಈಗ ಕಡ್ಡಾಯಗೊಳಿಸಿದ್ದು, ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ದಾಖಲಾತಿ ಮಾಡಬೇಕು. ಹಾಜರಾತಿ ವ್ಯವಸ್ಥೆಯು ಅವರ ಸಂಬಳದೊಂದಿಗೆ ಲಿಂಕ್ ಆಗಿದ್ದು, ಹಾಜರಾತಿ ನಮೂದು ಮಾಡದವರ ಸಂಬಳ ಕಡಿತವಾಗುತ್ತದೆ. ರಾಜ್ಯದ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಸೌಲಭ್ಯವು ಕಲ್ಪಿಸುವ ಕೆಲಸ ಶೇ.80 ರಷ್ಟು ಪೂರ್ಣ ಆಗಿದೆ. ಇನ್ನೂ ಶೇ.20 ರಷ್ಟು ಶೀಘ್ರ ಆಗಲಿದೆ ಎಂದು ತಿಳಿಸಿದರು.
ಆರು ಕೋಟಿ ಜನರಿಗೆ ಕಾರ್ಡ್
ಬಿಪಿಎಲ್ ಕಾರ್ಡುದಾರರು ಆಸ್ಪತ್ರೆಗೆ ಬಂದರೆ ಕಡ್ಡಾಯವಾಗಿ ಆಯುಷ್ಮಾನ್ ಕಾರ್ಡ್ ನೀಡಬೇಕು ಎಂದು ಸೂಚಿಸಿದ್ದು, ಅದನ್ನೂ ಅಧಿಕಾರಿಗಳು ಮಾಡಲಿದ್ದಾರೆ. ಇನ್ನೂ ಮೂರು ತಿಂಗಳಲ್ಲಿ ಐದೂವರೆಯಿಂದ ಆರು ಕೋಟಿ ಜನರಿಗೆ ಉಚಿತ ಆಯುಷ್ಮಾನ್ ಭಾರತ್ ಸ್ಮಾರ್ಟ್ ಕಾರ್ಡ್ ನೀಡುವ ಗುರಿ ಇದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಕಾರ್ಡ್ ನೀಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯಲಿದೆ ಎಂದರು.