ಲಕ್ನೋ: ಉತ್ತರ ಪ್ರದೇಶದ ಮೈನ್’ಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರ ಪತ್ನಿ ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಆರಂಭವಾದಾಗಿನಿಂದಲೂ ಡಿಂಪಲ್ ಅವರು 60%ಕ್ಕಿಂತ ಮತಗಳ ಅಂತರದ ಮುನ್ನಡೆ ಕಾಪಾಡಿಕೊಂಡು ಬಂದಿದ್ದಾರೆ. ಬಿಜೆಪಿಯು ರಘುರಾಜ್ ಸಿಂಗ್ ಸಾಖ್ಯರನ್ನು ಕಣಕ್ಕಿಳಿಸಿತ್ತು. ಇದರ ಜೊತೆಗೆ ರಾಂಪುರ ಮತ್ತು ಖತೌಲಿ ವಿಧಾನ ಸಭಾ ಕ್ಷೇತ್ರಗಳಿಗೂ ಮರು ಚುನಾವಣೆ ನಡೆದಿದೆ. ಎಲ್ಲ ಕಡೆ ಎಸ್ ಪಿ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇತ್ತು.
ಮುಲಾಯಂ ಸಿಂಗ್ ಯಾದವ್ ಅವರ ಸಾವಿನಿಂದ ಮೈನ್ ಪುರಿ ಲೋಕ ಸಭಾ ಕ್ಷೇತ್ರ ತೆರವಾಗಿತ್ತು. ರಾಂಪುರ್ ಸದರ್ ಶಾಸಕ ಅಜಂ ಖಾನ್’ರನ್ನು ಅನರ್ಹಗೊಳಿಸಿದ್ದರಿಂದ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಅದೇ ರೀತಿ ಖತೌಲಿಯ ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿಗೆ 2013ರ ಗಲಭೆ ಮೊಕದ್ದಮೆಯಲ್ಲಿ ಜಿಲ್ಲಾ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಅಲ್ಲೂ ಉಪ ಚುನಾವಣೆ ಘೋಷಣೆಯಾಯಿತು.
ಮೈನ್ ಪುರಿಯಲ್ಲಿ ಬಿಜೆಪಿಯು ಮೂಲದಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ಮುಲಾಯಂ ಅವರ ತಮ್ಮ ಶಿವಪಾಲ್ ಸಿಂಗ್ ಯಾದವ್ ರ ಹಿಂಬಾಲಕ ರಘುರಾಜ್ ಸಿಂಗ್ ಸಾಖ್ಯರನ್ನು ನಿಲ್ಲಿಸಿ ಮಾಡಿದ ರಾಜಕೀಯ ಫಲ ನೀಡಿಲ್ಲ. ಇಂದು ಒಡಿಶಾದ ಪದಂಪುರ, ರಾಜಸ್ತಾನದ ಸರ್ದರ್ ಶಹರ್, ಬಿಹಾರದ ಕುರ್ಹಾನಿ , ಛತ್ತೀಸಗಡದ ಭಾನುಪ್ರತಾಪಪುರಗಳ ಉಪ ಚುನಾವಣೆಗಳ ಮತ ಎಣಿಕೆಯೂ ನಡೆದಿದೆ.