ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಶಾಖೆ ಒಂದರಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯೊಬ್ಬರು ಅದೇ ಬ್ಯಾಂಕ್ ನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಉನ್ನತ ಹುದ್ದೆಯನ್ನು ಪಡೆದು ದೇಶದ ಗಮನ ಸೆಳೆದಿದ್ದಾರೆ.
ಪುಣೆ ಮೂಲದ ಪ್ರತಿಕ್ಷಾ ತೊಂಡವಾಲಕರ್ ಈ ಸಾಧನೆ ಮಾಡಿದ್ದಾರೆ.
37 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಗಂಡನನ್ನು ಕಳೆದುಕೊಂಡ ಪ್ರತಿಕ್ಷಾಗೆ ಅನುಕಂಪದ ಆಧಾರದಲ್ಲಿ ಮುಂಬೈ ಎಸ್ ಬಿಐ ಶಾಖೆ ಒಂದರಲ್ಲಿ ಕಸ ಗುಡಿಸುವುವ ಮತ್ತು ಶೌಚಾಲಯ ತೊಳೆಯುವ ತಿಂಗಳಿಗೆ ₹65 ಸಂಬಳದ ಕೆಲಸ ಸಿಕ್ಕಿತ್ತು. ಅವರ ಗಂಡ ಸದಾಶಿವ ಕಾಡು ಬುಕ್ ಬೈಂಡರ್ ಆಗಿ ಇದಕ್ಕೂ ಮುಂಚೆ ಅದೇ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕೇವಲ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದ ಪ್ರತಿಕ್ಷಾ ತನ್ನ 16 ನೇ ವಯಸ್ಸಿನಲ್ಲಿ ಮದುವೆಯಾಗಿ, 20 ನೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದರು. ಹೊಟ್ಟೆಪಾಡಿಗಾಗಿ ಹಾಗೂ ತನ್ನ ಮಗನ್ನು ಸಾಕಲು ಎಸ್ ಬಿಐನಲ್ಲಿ ಕಸ ಗುಡಿಸುವ ಕೆಲಸ ಮಾಡಲು ಪ್ರಾರಂಭಿಸಿದರು.
ಅವರ ಕಾರ್ಯವೈಖರಿ, ಸೇವಾದಕ್ಷತೆ ನೋಡಿ ಬ್ಯಾಂಕ್ ಸಿಬ್ಬಂದಿ ಹತ್ತನೇ ತರಗತಿ ಪರೀಕ್ಷೆ ಬರೆಯುವಂತೆ ಬೆಂಬಲ ನೀಡಿದ ಪರಿಣಾಮ 10 ನೇ ತರಗತಿಯಲ್ಲಿ ಶೇ 60 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಂದೆ ಅವರಿಗೆ ಅದೇ ಬ್ಯಾಂಕ್ ನಲ್ಲಿ ಅಟೆಂಡರ್ ಆಗಿ, ನಂತರ 12 ನೇ ತರಗತಿ ಕೂಡ ಪಾಸಾದ ಬಳಿಕ ಅದೇ ಬ್ಯಾಂಕ್ನಲ್ಲಿ ಕ್ಲರ್ಕ್ ಆಗಿ ಬಡ್ತಿ ಪಡೆದರು.
2004 ರಲ್ಲಿ ಪ್ರತಿಕ್ಷಾ ಅವರಿಗೆ ‘ಎಸ್ಬಿಐ ಟ್ರೈನಿ ಆಫೀಸರ್’ ಹುದ್ದೆ ಒಲಿದು ಬಂದಿದ್ದು, ಹೀಗೆ ಸಾಧನೆಯ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಸಾಗಿದ ಅವರು ಕಳೆದ ಜೂನ್ ನಲ್ಲಿ ಎಸ್ಬಿಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿ ಭಡ್ತಿ ಪಡೆದಿದ್ದಾರೆ.
ನಾನು ನನ್ನ ಜೀವನವನ್ನು ಹಿಂದಿರುಗಿ ನೋಡಿದಾಗ ಇಂತಹದೊಂದು ಸಾಧನೆ ನನ್ನಿಂದ ಸಾಧ್ಯವಿತ್ತೇ ಎಂದುಕೊಳ್ಳುತ್ತೇನೆ. ಆದರೆ, ಮಗನಿಗೋಸ್ಕರ ನಾನು ಕಷ್ಟಪಟ್ಟು ಮುಂದೆ ಬರಬೇಕು ಎಂಬ ಉದ್ದೇಶ ಮತ್ತು ಆತ್ಮವಿಶ್ವಾಸ ಇದ್ದಿದ್ದರಿಂದ ಇಂದು ಈ ಹಂತಕ್ಕೆ ಬಂದಿದ್ದೇನೆ. ಕಾಯಕದಲ್ಲಿ ನಿಷ್ಠೆ, ಗುರಿ ತಲುಪುವ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಪ್ರತಿಕ್ಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್ ಬಿಐನಲ್ಲಿ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸ್ಥಾನವು 11 ಅಧಿಕಾರ ಹುದ್ದೆಗಳಲ್ಲಿ 5 ನೇ ಶ್ರೇಣಿಯ ಉನ್ನತ ಹುದ್ದೆಯಾಗಿದೆ.