ಪುಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಯಿಂದ ಅಚಾತುರ್ಯ ಘಟನೆಯೊಂದು ನಡೆದಿದ್ದು, ನರ್ಸ್ ವೊಬ್ಬರು ವ್ಯಕ್ತಿಗೆ ಕೋವಿಡ್ ಬದಲು ರೇಬಿಸ್ ಚುಚ್ಚುಮದ್ದು ನೀಡಿದ್ದಾರೆ. ಅಚಾತುರ್ಯವೆಸಗಿದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೋವಿಡ್ ಲಸಿಕೆ ಹಾಕಿಸುವ ಸಲುವಾಗಿ ಸ್ಥಳೀಯ ನಿವಾಸಿ ರಾಜ್ ಕುಮಾರ್ ಯಾದವ್ ಎಂಬವರು ಕಲ್ವಾ ಎಂಬಲ್ಲಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಈ ಮಧ್ಯೆ ಕೋವಿಡ್ ಲಸಿಕೆ ಬದಲು ರೇಬಿಸ್ ಚುಚ್ಚುಮದ್ದನ್ನು ವೈದ್ಯರು ನೀಡಿದ್ದಾರೆ ಎಂದು ರಾಜ್ ಕುಮಾರ್ ಆರೋಪಿಸಿದ್ದಾರೆ. ಇವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಠಾಣೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಂತ್ರಸ್ತ ವ್ಯಕ್ತಿ ಕೋವಿಡ್ ಲಸಿಕೆ ಸಾಲನ್ನು ತಪ್ಪಿಸಿ ರೇಬಿಸ್ ಸಾಲಿನಲ್ಲಿ ನಿಂತಿರುವುದರಿಂದ ಈ ಸಮಸ್ಯೆವುಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಪ್ರಸಕ್ತ ಘಟನೆಯಿಂದ ವ್ಯಕ್ತಿಗೆ ಯಾವುದೇ ತೊಂದರೆಯಾಗಿಲ್ಲ. ಮಾತ್ರವಲ್ಲ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.