ಮುಝಾಫರ್‌ನಗರ:ಇಲ್ಲಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು ದಿನಕ್ಕೆ 10,000 ರೂ. ದಂಡ ತೆರಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಶಿಕ್ಷಣ ಇಲಾಖೆ ಆಯಾ ಮದರಸಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಹತ್ತಕ್ಕೂ ಹೆಚ್ಚು ಮದರಸಾಗಳಿಗೆ ಮೂಲ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಸೂಕ್ತ ದಾಖಲೆಗಳನ್ನು ನೀಡುವಂತೆ ಕೇಳಿದೆ.
ಮದರಸಾಗಳಿಗೆ ಶಿಕ್ಷಣ ಇಲಾಖೆಯ ನೀಡಿದ ನೋಟಿಸ್‌ನ್ನು “ಕಾನೂನುಬಾಹಿರ” ಎಂದು ಭಾರತೀಯ ಮುಸ್ಲಿಮರ ಸಂಘಟನೆಯಾದ ಜಮಿಯತ್ ಉಲಾಮಾ-ಇ-ಹಿಂದ್ ಹೇಳಿದೆ.
ಜಮಿಯತ್ ಉಲೇಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾರ್ಯದರ್ಶಿ ಮೌಲಾನಾ ಝಾಕಿರ್ ಹುಸೇನ್, ರಾಜ್ಯದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಅಕ್ರಮ ನೋಟಿಸ್‌ಗಳನ್ನು ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮದರಸಾಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ದಿನಕ್ಕೆ ರೂ. 10,000 ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಹುಸೇನ್ ಹೇಳಿದ್ದಾರೆ.
ಇದಲ್ಲದೆ, 4,000 ಮದರಸಾಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಅವುಗಳಲ್ಲಿ ಹೆಚ್ಚಿನವು ಇಂಡೋ-ನೇಪಾಳ ಗಡಿಯಿಂದ ಬರುವ ಹಣದಿಂದ ನಡೆಯುತ್ತಿವೆ, ಅವು ವಿದೇಶದಿಂದ ಹಣವನ್ನು ಪಡೆಯುತ್ತಿವೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಸುಮಾರು 24,000 ಮದರಸಾಗಳಿದ್ದು, ಅವುಗಳಲ್ಲಿ 16,000 ಮಾನ್ಯತೆ ಪಡೆದಿದೆ. 8,000 ಮದರಸಾಗಳು ಮಾನ್ಯತೆ ಪಡೆದಿಲ್ಲ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ನೋಟಿಸ್ ನೀಡಿರುವ ಮದರಸಾಗಳಿಗೆ ಆದೇಶ ಬಂದ ಮೂರು ದಿನಗಳೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮದರಸಾಗಳು ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ದಿನಕ್ಕೆ ರೂ. 10,000 ದಂಡ ವಿಧಿಸಲಾಗುವುದು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಮುಝಾಫರ್‌ನಗರ ಮೂಲ ಶಿಕ್ಷಣ ಅಧಿಕಾರಿ (ಬಿಎಸ್‌ಎ) ಶುಭಂ ಶುಕ್ಲಾ, ಇಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ಮದರಸಾಗಳು ಜಿಲ್ಲೆಯಲ್ಲಿ ನೋಂದಣಿ ಅಥವಾ ಮಾನ್ಯತೆ ಹೊಂದಿಲ್ಲ ಮತ್ತು ನಿಯಮಾವಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ತಮ್ಮ ಕಚೇರಿಗೆ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.