ಉನ್ನತ ಶಿಕ್ಷಣ ಮೀಸಲಾತಿ ಸಮಾಜದ ವಿವಿಧ ವರ್ಗಗಳ ಮಧ್ಯೆ ಭಿನ್ನತೆ ಸೃಷ್ಟಿಸಿದೆ: ಮದ್ರಾಸ್ ಹೈಕೋರ್ಟ್

Prasthutha|

ಚೆನ್ನೈ: ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ಸರ್ಟಿಫಿಕೇಟ್ ಕೋರಿ ಅರ್ಜಿ ಸಲ್ಲಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯೊಬ್ಬಳಿಗೆ ನಿರಾಳತೆಯನ್ನು ನೀಡಿರುವ ಮದ್ರಾಸ್ ಹೈಕೋರ್ಟ್ ಉನ್ನತ ಶಿಕ್ಷಣ ಮೀಸಲಾತಿಗೆ ಸಂಬಂಧಿಸಿದಂತೆ ಕೆಲವು ಅವಲೋಕನಗಳನ್ನು ಮಾಡಿದೆ.

- Advertisement -

ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಒಂದು ಗಂಭೀರ ವಿಷಯವೆಂದು ಹೇಳಿದ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪ ಸತ್ಯನಾರಾಯಣನ್, ಸಮಾಜದ ವಿವಿಧ ವರ್ಗಗಳ ಮಧ್ಯೆ ಭಿನ್ನತೆಯನ್ನು  ಸೃಷ್ಟಿಸಲು ಅದು ಕಾರಣವಾಗಿದೆ ಎಂದಿದ್ದಾರೆ.

“ಉನ್ನತ ಶಿಕ್ಷಣದಲ್ಲಿ ಮೀಸಲಾತಿಯು ಈಗ ಗಂಭೀರ ವಿಷಯವಾಗಿದೆ. ಸಮಾಜದಲ್ಲಿರುವ ವಿವಿಧ ವರ್ಗಗಳ ಮಧ್ಯೆ ಭಿನ್ನತೆಯನ್ನು ಅದು ಸೃಷ್ಟಿಸಿದೆ. ಜ್ನಾನವುಳ್ಳ ಅರ್ಹ ವಿದ್ಯಾರ್ಥಿಗಳು ಶಿಕ್ಷಣದ ಅವಕಾಶವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಆದರೆ ಮೆರಿಟ್ ಪಡೆಯಲು ಸಾಧ್ಯವಾಗದ ಮೀಸಲಾತಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅವಕಾಶಗಳನ್ನು ಅನುಭವಿಸುತ್ತಾರೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಕನಸನ್ನು ಪೂರೈಸಲು ಮತ್ತು ಯಶಸ್ವಿಯಾಗಲು ವಿಫಲರಾಗುತ್ತಾರೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಅವಕಾಶ ವಂಚಿತ ಮತ್ತು ತುಳಿತಕ್ಕೊಳಗಾದ ಜನರ ಉನ್ನತಿಗಾಗಿ ಅವರಿಗೆ ಉನ್ನತ ಶಿಕ್ಷಣದಲ್ಲಿಅವಕಾಶವನ್ನು ನೀಡಬೇಕು ಎಂಬುದು ಯಾವುದೇ ಅನುಮಾನವೇ ಇಲ್ಲದೆ ಸತ್ಯವಾಗಿದೆ. ಅದೇ ರೀತಿಯಲ್ಲಿ ವ್ಯಕ್ತಿಗಳು ಮುಂಚೂಣಿ ಸಮುದಾಯಕ್ಕೆ ಸೇರಿದ್ದು, ಆರ್ಥಿಕವಾಗಿ ಹಿಂದುಳಿದವರಾಗಿದ್ದರೆ, ಮೀಸಲಾತಿಯ ಕಾರಣಕ್ಕಾಗಿ ಅವರಿಗೆ ದೊರೆಯಬೇಕಾದ ಸ್ಥಾನವನ್ನು ನಿರಾಕರಿಸಬಾರದು. ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯ ಉದ್ದೇಶ ಇದೇ ಆಗಿದೆ” ಎಂದು ಅವರು ತೀರ್ಪಿನಲ್ಲಿ ಹೇಳಿದರು.

- Advertisement -

ನ್ಯಾಯಲಯದ ಮುಂದಿದ್ದ ಸದ್ರಿ ಪ್ರಕರಣದಲ್ಲಿ ಪದವಿಯೋತ್ತರ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿನಿಗೆ ಆರ್ಥಿಕ ದುರ್ಬಲ ವರ್ಗಗಳ ಸರ್ಟಿಫಿಕೇಟ್ ನೀಡಲು ನಿರಾಕರಿಸಲಾಗಿತ್ತು. ಆಕೆಯ ಕುಟುಂಬವು ವಾರ್ಷಿಕ  ಮಿತಿ 8 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯವನ್ನು ಹೊಂದಿದೆ ಎಂಬ ಕಾರಣವನ್ನು ನೀಡಲಾಗಿತ್ತು. ಆದರೆ ತನ್ನ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಮಿತಿಯನ್ನು ದಾಟಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಅರ್ಜಿದಾರೆ ಯಶಸ್ವಿಯಾಗಿದ್ದರು.



Join Whatsapp