ಕೊಡಗು: ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ಗ್ರಾಮದ ಪಾಣತ್ತಲೆ ಪಾಪಯ್ಯನವರು ಮಲಗಿದ್ದ ವೇಳೆ ತಡರಾತ್ರಿ 1 ಗಂಟೆಯ ಸುಮಾರಿಗೆ ಮನೆಯ ಎದುರಿಗೆ ಕಟ್ಟಿಹಾಕಿದ್ದ 2 ನಾಯಿಗಳು ವಿಚಿತ್ರವಾಗಿ ಚೀರಾಡಲು ಪ್ರಾರಂಭಿಸಿದೆ. ಕಿಟಕಿಯ ಮೂಲಕ ನೋಡಿದಾಗ , ಚಿರತೆಯೊಂದು ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಒಂದು ನಾಯಿಯ ಮೆದುಳು ಹೊರಬಂದಿದ್ದು ಸ್ಥಳದಲ್ಲಿಯೇ ಸಾವನಪ್ಪಿದೆ. ಇನ್ನೊಂದು ನಾಯಿಯ ಬಾಯಿಗೆ ಕಚ್ಚಿದ್ದು 1 ದಿನದ ಬಳಿಕ ಸಾವನ್ನಪ್ಪಿದೆ.
ಕಳೆದ ವರ್ಷವೂ ಕೂಡ ಮಳೆಗಾಲದ ಸಮಯದಲ್ಲಿ ಚಿರತೆಯೊಂದು ತಮ್ಮ ಮನೆಯ ಬಳಿ ಓಡಾಡಿರುವ ಸನ್ನಿವೇಶ ವನ್ನು ಅದೇ ಗ್ರಾಮದ ಬೈಚನ ಕುಟುಂಬದ ಹಿರಿಯರೊಬ್ಬರು ನೆನಪಿಸಿದರು.
ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ , ಯಾವೊಬ್ಬ ಅಧಿಕಾರಿಯೂ 2 ದಿನದಿಂದಲೂ ಭೆಟಿ ನೀಡಿಲ್ಲ. ತೋಟದ ಕಡೆ ಹೋಗಲು ಭಯಪಡುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.