ಕೊಡಗು: ಜ್ಞಾನವ್ಯಾಪಿ ಮಸೀದಿಯನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂದು ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು, ಎಲ್ಲಾ ವಕ್ಪ್ ಆಸ್ತಿಗಳನ್ನು ಸರ್ಕಾರ ಸಂರಕ್ಷಿಸಬೇಕು, places of worship act 1991 ಪಾಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮುಸಲ್ಮಾನರ 2ಬಿ ಮೀಸಲಾತಿಯನ್ನು ಶೇಕಡ 8 ಕ್ಕೆ ಏರಿಸಿ ಜಾರಿಗೆ ತರುವುದು. ಬಜೆಟ್ ಅಧಿವೇಶನದಲ್ಲಿ ಮುಸಲ್ಮಾನರಿಗೆ ರೂ.10 ಸಾವಿರ ಕೋಟಿ ಮೀಸಲಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನಿಟ್ಟ ಪ್ರತಿಭಟನಕಾರರು ನ್ಯಾಯ ಪಾಲನೆಗಾಗಿ ಒತ್ತಾಯಿಸಿದ್ದಾರೆ.
ಅಂಕಣಕಾರ ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವ ಸುಂದರ್ ಈ ಸಂದರ್ಭ ಮಾತನಾಡಿ, ಈ ಹೋರಾಟ ಕೇವಲ ಮುಸ್ಲಿಂ ಜಮಾಅತ್ ಒಕ್ಕೂಟಗಳ ಹೋರಾಟ ಅಲ್ಲ. ಬದಲಾಗಿ ಇದು ಸಕಲ ಜನರ ಭಾರತೀಯರ ಹೋರಾಟ ಆಗಬೇಕಾಗಿದೆ ಎಂದು ಹೇಳಿದರು.
ಇಂದು ಮಸೀದಿಯನ್ನು ಹೊಡೆಯುವ ಮೂಲಕ ಭಾರತೀಯರನ್ನು ಹೊಡೆದಾಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಕಂಡಿದ್ದ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ. ಭಾರತವನ್ನು ಹೊಡೆಯುವುದಕ್ಕೆ ಬಿಜೆಪಿ ಹಲವು ಕ್ರಮಗಳನ್ನು ಅನುಸರಿಸುತ್ತಿದ್ದು, ಅದರಲ್ಲಿ ಮಸೀದಿಗಳನ್ನು ಹೊಡೆಯುವುದು ಒಂದು ಭಾಗ. ಇಲ್ಲಿ ನಡೆಯುತ್ತಿರುವುದು ಧರ್ಮದ ವಿಷಯವೇ ಅಲ್ಲ, ದೇವಸ್ಥಾನಗಳನ್ನು ಕಟ್ಟುವುದು ಮೇಲ್ನೋಟಕ್ಕೆ ಧರ್ಮದ ವಿಷಯ ಅನ್ನಿಸಬಹುದು. ಆದರೆ ಮಸೀದಿ, ಜೈನ ಬಸದಿ, ಬೌದ್ಧ ಮಂದಿರಗಳನ್ನು ಕೆಡವಿ ಹಿಂದೂ ಧರ್ಮದ ಒಂದು ಸಮುದಾಯ ಭವ್ಯ ಮಂದಿರವನ್ನು ಕಟ್ಟುವುದು ಸರಿಯಲ್ಲ. ಇದನ್ನು ಯಾವುದೇ ಬಹುತೇಕ ಹಿಂದೂಗಳು ಒಪ್ಪಿಕೊಳ್ಳುವುದಿಲ್ಲ ಶಿವಸುಂದರ್ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಝೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಅಮೀನ್ ಮೊಹ್ಸಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಬಳಿಕ ಮನವಿ ಪತ್ರವನ್ನು ಸಲ್ಲಿಸಿದರು.