ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕ ಹಿನ್ನೆಲೆಯಲ್ಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಫಲವಾಗಿರುವ ಅಸಮರ್ಥ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು ಹಾಗೂ ಎಲ್ಲ ಶಾಸಕರ ನಿವಾಸ ಹಾಗೂ ಕಚೇರಿಗಳಲ್ಲಿ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರವರ ಮಗನು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಶಾಸಕರ ಮನೆಯಲ್ಲೂ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ. ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವ ಈ ಸಂದರ್ಭದಲ್ಲಿ ಶಾಸಕರೊಬ್ಬರ ಮನೆಯಲ್ಲಿ ಈ ಪ್ರಮಾಣದ ನಗದು ಪತ್ತೆಯಾಗಿರುವುದು ಗಂಭೀರ ವಿಚಾರವಾಗಿದ್ದು, ಹಣದ ಮೂಲವೇನು ಹಾಗೂ ಏಕೆ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆಯಾಗಬೇಕು. ಪ್ರಕರಣದ ಕುರಿತು ಸಿಬಿಐ, ಇಡಿ, ಐಟಿ ಸಂಸ್ಥೆಗಳಿಂದ ಸೂಕ್ತ ತನಿಖೆಯಾಗಬೇಕು. ಎಲ್ಲ ಶಾಸಕರ ಮನೆ, ಕಚೇರಿಗಳಲ್ಲಿ ಶೀಘ್ರವೇ ತಪಾಸಣೆ ನಡೆಸಿ, ಅಕ್ರಮ ನಗದನ್ನು ವಶಪಡಿಸಿಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
“ವಿರೂಪಾಕ್ಷಪ್ಪನವರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗುವ ತನಕ ಅವರು ಐದು ದಿನಗಳ ಕಾಲ ಪೊಲೀಸರು ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಸಿಗದಂತೆ ನಾಪತ್ತೆಯಾಗಿದ್ದನ್ನು ಗಮನಿಸಿದರೆ ಇಡೀ ಸರ್ಕಾರ ಅವರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಆಡಳಿತದ 40% ಕಮಿಷನ್ ದಂಧೆಗೆ ಸಂಬಂಧಿಸಿದ ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಂದಿದ್ದರೂ, ಸಿಎಂ ಬಸವರಾಜ ಬೊಮ್ಮಾಯಿಯವರು ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರುವುದು ದುರಂತ. ಬಿಜೆಪಿ ಶಾಸಕರುಗಳಿಂದ ರಾಜ್ಯದ ಬೊಕ್ಕಸ ಲೂಟಿಯಾಗುತ್ತಿರುವುದು ಹಾಗೂ 40% ಕಮಿಷನ್ ದಂಧೆಯ ನೈತಿಕೆ ಹೊಣೆಹೊತ್ತು ಸಿಎಂ ಸ್ಥಾನಕ್ಕೆ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು” ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವೆಂದರೆ ಸಿಎಂ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರ. ಬೊಮ್ಮಾಯಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಯು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ, ಬಿಜೆಪಿ ಶಾಸಕರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರು ಆರೋಪ ಮಾಡಿದಾಗ, ಸೂಕ್ತ ಸಾಕ್ಷಿ ಇಲ್ಲವೆಂದು ಹೇಳಿ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಅವರನ್ನೇ ಬಂಧಿಸಲಾಗಿತ್ತು. ಈಗ ಲೋಕಾಯುಕ್ತ ದಾಳಿಯಿಂದಾಗಿ 40% ಕಮಿಷನ್ ಆರೋಪಕ್ಕೆ ಸಾಕ್ಷಿ ದೊರೆತಿದ್ದು, ಕೆಂಪಣ್ಣನವರನ್ನು ವಿನಾಕಾರಣ ಬಂಧಿಸಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು ಅವರ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಡಾ.ಸತೀಶ್ ಕುಮಾರ್, ಅಶೋಕ್ ಮೃತ್ಯುಂಜಯ, ಚನ್ನಪ್ಪಗೌಡ ನೆಲ್ಲೂರು, ಕಾಳಿದಾಸ ಜೊನ್ನಾಲ, ಗೋಪಿನಾಥ್ ನಾಯ್ಡು, ನಾರಿ ಶ್ರೀನಿವಾಸ್, ಅನಿಲ್ ನಾಚಪ್ಪ, ಶ್ರೀನಿವಾಸ್ ರೆಡ್ಡಿ, ಸತೀಶ್ ಗೌಡ, ಕೇಶವ್ ಕುಮಾರ್, ಶಶಿಧರ್ ಆರಾಧ್ಯ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.