►4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರು: ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ ಸಂದರ್ಭದಲ್ಲೇ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮುಸ್ಲಿಮ್ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ಸುರತ್ಕಲ್ ಬಳಿ ನಡೆದಿದೆ.
ಮಸೂದ್, ಪ್ರವೀಣ್ ಹತ್ಯೆ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ನಗರದ ಸುರತ್ಕಲ್ ಸಮೀಪ ಫಾಝಿಲ್ ಎಂಬ ಯುವಕನನ್ನು ದುಷ್ಕರ್ಮಿಗಳ ತಂಡವೊಂದು ತಲವಾರ್ ದಾಳಿ ನಡೆಸಿ ಹತ್ಯೆ ಗೈದಿದೆ.
ಸುರತ್ಕಲ್ ಸಮೀಪದ ಮಂಗಳಪೇಟೆಯ ನಿವಾಸಿಯಾಗಿದ್ದ ಫಾಝಿಲ್, ಚಪ್ಪಲಿ ಖರೀದಿಗೆಂದು ಸುರತ್ಕಲ್’ಗೆ ಬಂದಿದ್ದು ಗೆಳೆಯನೊಂದಿಗಿದ್ದ ಸಮಯದಲ್ಲೇ ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ತೀವ್ರರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಈ ಸಂಬಂಧವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಂಗಳೂರು ಪೊಲೀಸ್ ಆಯುಕ್ತ ಎನ್, ಶಶಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಹಲ್ಲೆಯ ಸಂದರ್ಭ ಹಾಜರಿದ್ದ ಪ್ರತ್ಯಕ್ಷದರ್ಶಿಗಳನ್ನು ತನಿಖೆ ಮಾಡುತ್ತಿದ್ದೇವೆ, ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಸುರತ್ಕಲ್,ಪಣಂಬೂರು, ಮುಲ್ಕಿ,ಬಜ್ಪೆ ಈ ನಾಲ್ಕು ಪೊಲೀಸ್ 4 ಠಾಣಾ ವ್ಯಾಪ್ತಿಯಲ್ಲಿ ಅಹಿತಕರ ಘಟನೆ ನಡೆಯಬಾರದೆಂದು ತ್ವರಿತವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡುತ್ತಿದ್ದೇನೆ ಎಂದು ಹೇಳಿದರ. ಈ ನಿಷೇದಾಜ್ಞೆ ಜುಲೈ 30 ರ ಬೆಳಗ್ಗೆವರೆಗೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ