ನವದೆಹಲಿ : ಲುತ್ಫಿ ಹಸನ್ ಈ ಹೆಸರು ಹೆಚ್ಚಿನವರು ಕೇಳಿರಲಿಕ್ಕಿಲ್ಲ. ಆದರೆ, ಅಮೆರಿಕದಲ್ಲಿ ಇತ್ತಿಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಇವರೂ ಒಬ್ಬರು. ಅಮೆರಿಕದ ರಾಜಕಾರಣದಲ್ಲಿ ದಶಕಗಳಿಂದ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾದ ಇವರು ದಕ್ಷಿಣ ಭಾರತದ ಹೈದರಾಬಾದ್ ಮೂಲದವರು ಎಂಬುದು ವಿಶೇಷ.
ಹಸನ್ ಅವರು ಕಳೆದ 30 ವರ್ಷಗಳಿಂದ ಡೆಮಾಕ್ರಟಿಕ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇದೀಗ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಗೆಲುವಿಗೆ ಇಡೀ ಅಮೆರಿಕದಲ್ಲಿ ದಕ್ಷಿಣ ಏಷ್ಯಾದ ನಾಗರಿಕರ ಮನವೊಲಿಸುವ ಕಾರ್ಯವನ್ನು ಹಸನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ‘ಸೌತ್ ಏಷ್ಯನ್ಸ್ ಫಾರ್ ಬೈಡನ್ (ಬೈಡನ್ ಗಾಗಿ ದಕ್ಷಿಣ ಏಷ್ಯಾದವರು)’ ಅಭಿಯಾನದ ಮೂಲ ಬೈಡನ್ ಪರವಾಗಿ ದೇಣಿಗೆ ಸಂಗ್ರಹ, ಸಮುದಾಯ ಬೆಂಬಲ ಸಂಗ್ರಹದಲ್ಲಿ ಹಸನ್ ಮುಂಚೂಣಿಯಲ್ಲಿದ್ದರು.
ಹಸನ್ ಅಮೆರಿಕದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ 40 ವರ್ಷಗಳಿಂದ ವಾಸವಿದ್ದಾರೆ. 2000ನೇ ವರ್ಷದಲ್ಲಿ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಹಸನ್ ಅವರನ್ನು ಕೇಂದ್ರ ಏಷ್ಯಾದ ಅಮೆರಿಕನ್ನರ ಉದ್ಯಮ ನಿಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಅಧ್ಯಕ್ಷ ಬುಷ್ ಅವರ ಅವಧಿಯಲ್ಲೂ ಹಸನ್ ಸೇವೆಯಲ್ಲಿ ಮುಂದುವರಿದಿದ್ದರು.
ಅಮೆರಿಕದ ಭಾರತೀಯರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ಪರಿಹರಿಸುವಲ್ಲಿ ಹಸನ್ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹಲವು ಆಡಳಿತಾತ್ಮಕ ಹುದ್ದೆಗಳಲ್ಲಿ ಹಸನ್ ಅಮೆರಿಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿ ಜನಿಸಿ, ಅಮೆರಿಕದಲ್ಲಿ ಪ್ರಭಾವಶಾಲಿಯಾಗಿ ಬೆಳೆದ ಹಸನ್ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕವಾದುದು.