ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

Prasthutha|

ಚಾಮರಾಜನಗರ: ಪ್ರೀತಿಸಿದ ಯುವತಿಯು ತನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಆಕೆಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿಹಾಕಿಕೊಂಡಿದ್ದು ಇಬ್ಬರು ದಾರುಣ ಸಾವನ್ನಪ್ಪಿದ  ಘಟನೆ ಯಳಂದೂರು ತಾಲ್ಲೂಕಿನ ಮಾಂಬಳ್ಳಿಯಲ್ಲಿ ನಡೆದಿದೆ.

- Advertisement -

ಮಾಂಬಳ್ಳಿಯ ಶ್ರೀನಿವಾಸ್ (23) ಹಾಗೂ ಅದೇ ಗ್ರಾಮದ ಕಾಂಚನಾ (22) ಮೃತಪಟ್ಟವರು. ಕಾರಿನ ಒಳಭಾಗಕ್ಕೆ ಪೆಟ್ರೋಲ್‌ ಸುರಿದು ಶ್ರೀನಿವಾಸ್ ಬೆಂಕಿ ಹಚ್ಚಿಕೊಂಡಿದ್ದು ಇದರಿಂದ ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಒಂದೇ ಸೀಟಿನಲ್ಲಿ ಇಬ್ಬರ ತಲೆಬುರುಡೆಗಳು ಕಂಡು ಬಂದಿವೆ.

ಈ‌ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಅಗರ–ಮಾಂಬಳ್ಳಿ ಠಾಣೆಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -

ನರ್ಸ್‌ ಆಗಿದ್ದ ಕಾಂಚನ

ಕಾಂಚನ ಅವರು ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಕೃಷಿಕರಾಗಿದ್ದ ಶ್ರೀನಿವಾಸ್‌ ಕ್ಯಾಬ್ ಚಾಲಕರಾಗಿದ್ದು ಹಿಂದೆ ಒಂದೇ ಶಾಲೆಯ‌ ಸಹಪಾಠಿಗಳಾಗಿದ್ದರು. ಶ್ರೀನಿವಾಸ್‌ ಅವರು ಕಾಂಚನ ಅವರನ್ನು ಹಲವು ಸಮಯದಿಂದ ಪ್ರೀತಿಸುತ್ತಿದ್ದು‌ ಆದರೆ, ಆಕೆಯ ಕುಟುಂಬದವರಿಗೆ ಇದು ಇಷ್ಟವಿರಲಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ, ಕಾಂಚನ ಕೂಡ ಶ್ರೀನಿವಾಸ್‌ ಅವರಿಂದ ದೂರ ಇದ್ದರು.

ಶ್ರೀನಿವಾಸ್‌ ಅವರು ಕಾಂಚನ ಅವರನ್ನು ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಕೂರಿಸಿಕೊಂಡು ಮಾಂಬಳ್ಳಿಯಿಂದ ಕಿನಕಳ್ಳಿಗೆ ಹೋಗುವ ಮುಖ್ಯ ರಸ್ತೆಯಿಂದ ಎರಡು ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಪಕ್ಕದ ಜಮೀನಿನಲ್ಲಿ ಹಸು ಮೇಯಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ಕಾರು ಉರಿಯುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಪೊಲೀಸರು ಬಂದಾಗ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಎಂದು ಎಣಿಸಿದ್ದರು. ಆದರೆ, ಹತ್ತಿರ ಹೋಗಿ ಇಣುಕಿ ನೋಡಿದಾಗ ಒಳಗಡೆ ಒಂದೇ ಎರಡು ತಲೆ ಬುರುಡೆಗಳು ಕಂಡು ಬಂದವು. ಕಾರಿನ ಬಾಗಿಲು ಲಾಕ್‌ ಇತ್ತು.

ಪ್ರಕರಣ ದಾಖಲು

ಆರಂಭದಲ್ಲಿ ಪ್ರೇಮಿಗಳ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ, ವಿಚಾರಣೆ ನಡೆಸಿದಾಗ ಶ್ರೀನಿವಾಸ್‌ ಅವರನ್ನು ಕಾಂಚನ ಇಷ್ಟಪಡುತ್ತಿರಲಿಲ್ಲ ಎಂಬುದು ಗೊತ್ತಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶ್ರೀನಿವಾಸ್‌, ಯುವತಿಯನ್ನು ಪ್ರೀತಿಸುತ್ತಿದ್ದುದು ನಿಜ. ಆದರೆ, ಆತ ತನಗೆ ಇಷ್ಟ ಇಲ್ಲ ಎಂದು ಮನೆಯವರಲ್ಲಿ ಕಾಂಚನ ಹೇಳಿದ್ದಳು ಎಂಬುದು ಗೊತ್ತಾಗಿದೆ. ಇದೇ ವಿಷಯಕ್ಕೆ ಮೂರು ತಿಂಗಳ ಹಿಂದೆಯೂ ಶ್ರೀನಿವಾಸ್‌ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅದೃಷ್ಟವಶಾತ್‌ ಬದುಕುಳಿದಿದ್ದರು ಎಂದು ಅವರ ಸ್ನೇಹಿತರು  ತಿಳಿಸಿದ್ದಾರೆ.

Join Whatsapp