ಮಂಗಳೂರು | ಅನಾರೋಗ್ಯಪೀಡಿತ ಆರೋಪಿಯನ್ನು ಸ್ಟ್ರೆಚರ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು: ನ್ಯಾಯಾಧೀಶ ಗರಂ

Prasthutha|

ಮಂಗಳೂರು: ತೀವ್ರ ಅನಾರೋಗ್ಯ ಪೀಡಿತನಾದ ಅಪರಾಧ ಪ್ರಕರಣವೊಂದರ ಆರೋಪಿಯನ್ನು ಸ್ಟ್ರೆಚರ್ ಸಹಾಯದಿಂದ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಪೊಲೀಸರ ವರ್ತನೆಗೆ ನ್ಯಾಯಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಆರೋಪಿಯ ದುಸ್ಥಿತಿಯನ್ನು ಕಂಡ ಯುವ ವಕೀಲ ಫಾರೂಕ್ ಎಂಬವರು ಆರೋಪಿಯ ಪರ ಉಚಿತ ವಕಾಲತ್ತು ಮಾಡುವುದಾಗಿ ಭರವಸೆ ನೀಡಿದ ಮಾನವೀಯ ಘಟನೆಯೂ ಇದೇ ವೇಳೆ ಕಂಡುಬಂತು.

- Advertisement -


ಘಟನೆಯ ಹಿನ್ನೆಲೆ

ಅಡ್ಡೂರಿನ ಮುಹಮ್ಮದ್ ಎಂಬವರ ವಿರುದ್ಧ ಹಲವು ವರ್ಷಗಳ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರಂಟ್ ಕೂಡ ಹೊರಡಿಸಲಾಗಿತ್ತು.
ಈ ಮಧ್ಯೆ ಆರೋಪಿ ಮುಹಮ್ಮದ್ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಇದೇ ವೇಳೆ ಕುಟುಂಬ ಕೂಡ ಅವರಿಂದ ದೂರವಾಗಿತ್ತು. ಇದರಿಂದ ಮುಹಮ್ಮದ್ ಅನಾಥರಾಗಿ ಏಕಾಂಗಿಯಾಗಿದ್ದರು. ಈ ಬಗ್ಗೆ ತಿಳಿದ ಆಸಿಫ್ ಎಂಬ ಸಾಮಾಜಿಕ ಕಾರ್ಯಕರ್ತ, ಸಂಕಷ್ಟದಲ್ಲಿದ್ದ ಮುಹಮ್ಮದ್ ಅವರನ್ನು ಕೂಡಲೇ ಮೂಲ್ಕಿ ಕಾರ್ನಾಡುವಿನಲ್ಲಿರುವ ಅನಾಥಾಶ್ರಮಕ್ಕೆ ದಾಖಲಿಸಿದ್ದರು. ಕಳೆದ ಮೂರು ತಿಂಗಳಿಂದ ಅನಾಥಾಶ್ರಮದಲ್ಲಿ ನೆಲೆಸಿದ್ದ ಮುಹಮ್ಮದ್ ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.


ಪ್ರಕರಣವೊಂದಕ್ಕೆ ಸಂಬಂಧಿಸಿ ಮುಹಮ್ಮದ್ ಅವರನ್ನು ಆಗಸ್ಟ್ 12ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರು ಆಸಿಫ್ ಮೇಲೆ ಒತ್ತಡ ಹಾಕಿದ್ದರು. ಆಸಿಫ್ ಅವರು ಪೊಲೀಸರಿಗೆ ಮುಹಮ್ಮದ್ ಅವರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರೂ ಪೊಲೀಸರು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ವಾರಂಟ್ ಇರುವುದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲೇಬೇಕು ಎಂದು ಒತ್ತಡ ಹೇರಿದರು. ಕೊನೆಗೆ ವಿಧಿಯಿಲ್ಲದೆ ಆಸಿಫ್ ಕಳೆದ ಗುರುವಾರ ಆಂಬುಲೆನ್ಸ್ ಮೂಲಕ ಮುಹಮ್ಮದ್ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಸ್ಟ್ರೆಚರ್ ನಲ್ಲೇ ಮಲಗಿಸಿ ನ್ಯಾಯಾಧೀಶರ ಎದರು ಹಾಜರುಪಡಿಸಿದ್ದಾರೆ.

- Advertisement -


ಆರೋಪಿಯ ಪರಿಸ್ಥಿತಿಯನ್ನು ಕಂಡು ಗರಂ ಆದ ನ್ಯಾಯಾಧೀಶರು ಪೊಲೀಸರ ವಿರುದ್ಧ ಹರಿಹಾಯ್ದರು. ಇಂತಹ ಸ್ಥಿತಿಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಅಗತ್ಯವೇನಿತ್ತು? ನಿಮಗೆ ಮಾನವೀಯತೆ ಇದೆಯೇ ? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮುಹಮ್ಮದ್ ಅವರನ್ನು ಆಂಬುಲೆನ್ಸ್ ಮೂಲಕ ಅನಾಥಾಶ್ರಮಕ್ಕೆ ಕಳುಹಿಸಲಾಯಿತು.

Join Whatsapp