ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ ತಡೆಯಲು ಹೋದ ಬಿಜೆಪಿಗರಿಗೆ ದೊಡ್ಡ ಮುಖಭಂಗ | ‘ಲವ್ ಜಿಹಾದ್’ ರಾಜಕಾರಣ ಬಯಲಿಗೆಳೆದ ಹುಡುಗಿಯ ತಂದೆ!

Prasthutha|

ಲಖನೌ : ವಿಶೇಷ ವಿವಾಹ ಕಾಯ್ದೆಯಡಿ ಕಾನೂನಾತ್ಮಕವಾಗಿ ವಿವಾಹವಾಗಿದ್ದರೂ, ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನೊಬ್ಬನ ಮದುವೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದ ಘಟನೆ ನಡೆದಿದೆ. ಸಿಎಂ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದ ಘಾಝಿಯಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

- Advertisement -

ಆದರೆ, ಈ ಘಟನೆಯಲ್ಲಿ ಯುವತಿಯ ತಂದೆ ತಮ್ಮ ಮಗಳು ಮತ್ತು ಮುಸ್ಲಿಂ ಅಳಿಯನ ಪರವಾಗಿ ದೃಢವಾಗಿ ನಿಂತಿದ್ದು, ಬಿಜೆಪಿಗರ ‘ಲವ್ ಜಿಹಾದ್’ ರಾಜಕಾರಣಕ್ಕೆ ದೊಡ್ಡ ಹಿನ್ನಡೆ ಹಾಗೂ ಭಾರೀ ಮುಖಭಂಗವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಅಜಯ್ ಶರ್ಮಾ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಯುವತಿಯ ಮನೆ ಮುಂದೆ ಗದ್ದಲವೆಬ್ಬಿಸಿ, ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದೊಂದು ‘ಲವ್ ಜಿಹಾದ್’ ಪ್ರಕರಣವಾಗಿದ್ದು, ಮದುವೆಗೆ ಜಿಲ್ಲಾಡಳಿತದ ಅನುಮತಿ ಪಡೆದಿಲ್ಲ ಎಂದು ವಾದಿಸಿದ್ದಾರೆ.

- Advertisement -

ಆದರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಯುವತಿಯ ತಂದೆ ಮದುವೆಗೆ ಅಗತ್ಯವಿರುವ ಆಡಳಿತಾತ್ಮಕ ಅನುಮತಿ ಪಡೆದಿದ್ದು, ಈ ಬಿಜೆಪಿ ಕಾರ್ಯಕರ್ತರಿಗೆ ಸುದ್ದಿಯಲ್ಲಿರಲು ಏನಾದರೂ ಒಂದು ಘಟನೆ ಬೇಕಾಗುತ್ತದೆ. ತಾನು ಈ ಆಟದಲ್ಲಿ ಅವರಿಗೆ ದಾಳ ಆಗಿದ್ದೇನೆ ಎಂದು ಹೇಳಿದ್ದಾರೆ.

ದಂಪತಿಗಳಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಸಪ್ತಪದಿ ತುಳಿದು ಮದುವೆಯಾಗಲೂ ಮದುಮಗ ಸಿದ್ಧನಿದ್ದೆ. ಆದರೆ ಅಗತ್ಯವೇನು ಇಲ್ಲ ಎಂದು ವಧುವಿನ ತಂದೆ ಹೇಳಿದ್ದಾರೆ.

ಈ ಜನರಿಗೆ ನಮ್ಮ ಪ್ರತಿರೋಧದ ಮೂಲಕ ಸಮಾಜಕ್ಕೆ ಸಂದೇಶ ನೀಡಲು ನಾನು ಬಯಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುವತಿಯ ತಂದೆ ಓರ್ವ ಚಾರ್ಟರ್ಡ್ ಅಕೌಂಟೆಂಟ್, ಉದ್ಯಮಿ ಮತ್ತು ಐಎಎಸ್ ಅಧಿಕಾರಿಯೊಬ್ಬರ ಮಗ. ಮದುಮಗನ ತಂದೆ ದೆಹಲಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ.

‘ಲವ್ ಜಿಹಾದ್’ ಎಂಬ ಪದವನ್ನು ಬಿಜೆಪಿಗರು ಕಳೆದ ಕೆಲವು ವರ್ಷಗಳಿಂದ ಕಟ್ಟುಕತೆಗಳನ್ನು ಹೆಣೆಯುವ ಮೂಲಕ ಹರಡುತ್ತಾ ಬಂದಿದ್ದಾರೆ. ಬಿಜೆಪಿ ಸಿದ್ಧಾಂತ ಹರಡುವ ವೇದಿಕೆಗಳಾಗಿರುವ ಮುಖ್ಯವಾಹಿನಿಯ ಮಾಧ್ಯಮಗಳು ಈ ಕತೆಗಳಿಗೆ ಇನ್ನಷ್ಟು ರೋಚಕತೆಯನ್ನು ಸೃಷ್ಟಿಸಿ, ಸಾಮಾನ್ಯ ಜನ ಅದನ್ನು ನಂಬುವಂತೆ ಮಾಡಿವೆ. ಹೀಗಾಗಿ ಅಧಿಕಾರದಲ್ಲಿರುವ ಬಿಜೆಪಿಗರಿಗೆ ಇಂತಹುದೊಂದು ಕಾನೂನು ತಂದಿದ್ದೇವೆ ಎಂದು ಹೇಳುವ ಮೂಲಕ ಜನಸಾಮಾನ್ಯರಿಗೆ, ಅದರಲ್ಲೂ ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಬೇಕಾಗಿದೆ. ಹೀಗಾಗಿ, ಈಗಾಗಲೇ ಇರುವ ಮತಾಂತರ ತಡೆ ಕಾಯ್ದೆಗೆ ಒಂದಷ್ಟು ತಿದ್ದುಪಡಿಗಳನ್ನು ತಂದು, ಎಲ್ಲೂ ‘ಲವ್ ಜಿಹಾದ್’ ಪದ ಉಲ್ಲೇಖ ಮಾಡದೆ, ಹೊಸ ಕಾನೂನು ತಂದಿದ್ದೇವೆ ಎಂದು ಜನತೆಯ ಹಾದಿ ತಪ್ಪಿಸಲಾಗುತ್ತಿದೆ.  

Join Whatsapp