TRP ಹಗರಣ | ಅರ್ನಾಬ್ ಗೋಸ್ವಾಮಿ ತನಗೆ ಲಕ್ಷಾಂತರ ರೂ., ದುಬಾರಿ ವಾಚ್ ಲಂಚ ನೀಡಿದ್ದುದನ್ನು ಒಪ್ಪಿಕೊಂಡ ಬಾರ್ಕ್ ಮಾಜಿ ಮುಖ್ಯಸ್ಥ

Prasthutha|

ಮುಂಬೈ : ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ತನ್ನ ಚಾನೆಲ್ ಗಳನ್ನು ಉತ್ತೇಜಿಸಲು ಲಕ್ಷಾಂತರ ರೂ. ನಗದು ಮತ್ತು ದುಬಾರಿ ಕೈಗಡಿಯಾರವನ್ನು ಲಂಚವಾಗಿ ನೀಡಿದ್ದಾರೆ ಎಂದು ಬ್ರಾಡ್ ಕಾಸ್ಟ್ ರಿಸರ್ಚ್ ಅಡಿಯನ್ಸ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಒಪ್ಪಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

- Advertisement -

ಪಾರ್ಥೊ ದಾಸ್ ಗುಪ್ತಾ ಮನೆಯೊಂದ ಮುಂಬೈ ಪೊಲೀಸರು ಮೂರು ಕಿ.ಗ್ರಾಂ. ಬೆಳ್ಳಿ ವಶಪಡಿಸಿಕೊಂಡಿದ್ದಾರೆ. ಈ ಮೂರು ಕೆಜಿ ಬೆಳ್ಳಿಯನ್ನು ಅರ್ನಾಬ್ ಗೋಸ್ವಾಮಿ ನೀಡಿದ ಹಣದಿಂದ ಖರೀದಿಸಲಾಗಿದೆ. ತನ್ನ ಇಂಗ್ಲಿಷ್ ನ್ಯೂಸ್ ಚಾನೆಲ್ ರಿಪಬ್ಲಿಕ್ ಟಿವಿ ಮತ್ತು ಹಿಂದಿ ರಿಪಬ್ಲಿಕ್ ಭಾರತ್ ಪ್ರಚಾರಕ್ಕಾಗಿ ಈ ಹಣ ನೀಡಲಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 2013ರಿಂದ 2019ರ ವರೆಗೆ ದಾಸ್ ಗುಪ್ತಾ ಬಾರ್ಕ್ ಸಿಇಒ ಆಗಿದ್ದರು.

ಮುಂಬೈ ಪೊಲೀಸರ ಅಪರಾಧ ವಿಭಾಗವು ಡಿ.24ರಂದು ಪುಣೆಯಿಂದ ದಾಸ್ ಗುಪ್ತಾರನ್ನು ಬಂಧಿಸಿತ್ತು. ಟಿಆರ್ ಪಿ ತಿರುಚಲು ದಾಸ್ ಗುಪ್ತಾ ಮತ್ತು ಗೋಸ್ವಾಮಿ ಶಾಮೀಲಾಗಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಟಿಆರ್ ಪಿ ಅಳೆಯಲು ಬಾರೋಮೀಟರ್ ಅಳವಡಿಸಲಾಗಿರುವ ಮನೆಗಳ ಗೌಪ್ಯ ದತ್ತಾಂಶವನ್ನು ದಾಸ್ ಗುಪ್ತಾ ಅರ್ನಾಬ್ ಗೋಸ್ವಾಮಿ ಜೊತೆ ಹಂಚಿಕೊಂಡಿದ್ದರು. ಈ ದತ್ತಾಂಶ ಬಳಸಿಕೊಂಡು ಗೋಸ್ವಾಮಿ ಆ ಮನೆಯವರಿಗೆ ಲಂಚ ನೀಡಿದ್ದರು. ಮನೆಯವರಿಗೆ ಇಂಗ್ಲಿಷ್ ಭಾಷೆ ಅರ್ಥವಾಗದಿದ್ದರೂ, ತಮ್ಮ ನಿರ್ದಿಷ್ಟ ಚಾನೆಲ್ ಗಳನ್ನು ವೀಕ್ಷಿಸಲು ಒತ್ತಾಯಿಸಿದ್ದರು. ಕೆಲವು ಮನೆಗಳು ಮುಚ್ಚಿದ್ದರೂ ಸಹ ಇದೇ ಚಾನೆಲ್ ಗಳು ಪ್ರಸಾರವಾಗುತ್ತಿದ್ದವು. ಟಿಆರ್ ಪಿ ಹಗರಣದಲ್ಲಿ ಭಾಗಿಯಾದ ಜನರಿಗೆ ಈ ರೀತಿ ಮಾಡಲು ಸೂಚನೆ ನೀಡಲಾಗಿತ್ತು ಎಂದು ಪೊಲೀರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಟಿಆರ್ ಪಿ ಹಗರಣದಲ್ಲಿ ದಾಸ್ ಗುಪ್ತಾ ಸೇರಿದಂತೆ ಇದುವರೆಗೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp