ಬೆಂಗಳೂರು: ಜೊತೆಯಲ್ಲಿ ಓದುತ್ತಿದ್ದ ಸಹಪಾಠಿಯು ಪ್ರೀತಿಸಲು ನಿರಾಕರಿಸಿದ್ದರಿಂದ ನೊಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳು ತಮ್ಮ ಮನೆಯ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಿಪೇಟೆಯಲ್ಲಿ ನಡೆದಿದೆ.
ಅಕ್ಕಿಪೇಟೆ ನಿವಾಸಿ ದೂದ್ ರಾಮ್ ಮಾಲಿಯ ಎಂಬುವರ ಪುತ್ರಿ ಮೃತ ಬಾಲಕಿಯಾಗಿದ್ದು ಸೋಮವಾರ ರಾತ್ರಿ 9.30ಕ್ಕೆ ಈ ದುರ್ಘಟನೆ ನಡೆದಿದೆ.ಘಟನೆಯ ನಂತರ ಬಾಲಕಿ ತಂದೆ ಮಗಳ ಸ್ನೇಹಿತನಾಗಿದ್ದ ಬಾಲಕನ ವಿರುದ್ಧ ದೂರು ನೀಡಿದ್ದಾರೆ. ಮಗಳ ಸಾವಿನ ಹಿಂದೆ ಆತನ ಕೈವಾಡವಿದೆ ಎಂದು ಆರೋಪಿಸಿದ್ದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಕಾಟನ್ ಪೇಟೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿಯ ಮೊಬೈಲ್ ನಂಬರ್ ಡಿಟೇಲ್ಸ್ ಹಾಗೂ ಇತರೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಬಾಲಕಿ ಹಲವು ದಿನಗಳಿಂದ ಸಹಪಾಠಿ ಬಾಲಕನನ್ನು ಪ್ರೀತಿಸುತ್ತಿದ್ದ ಆತ ನಿರಾಕರಿಸಿದ್ದೇ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.