ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮೊಬೈಲ್ ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ ನಿರ್ಬಂಧ

Prasthutha|

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಸಂಚರಿಸುವ ವೇಳೆ ಪ್ರಯಾಣಿಕರು ಮೊಬೈಲ್ ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

- Advertisement -

ಬಸ್ ಗಳಲ್ಲಿ ಸಂಚರಿಸುವ ವೇಳೆ ಪ್ರಯಾಣಿಕರು ಮೊಬೈಲ್ ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುತ್ತಿದ್ದು, ಇದರಿಂದ ಶಬ್ದ ಮಾಲಿನ್ಯ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಇತರೆ ಸಹ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನಿರ್ಬಂಧಿಸಿರುವ ಸುತ್ತೋಲೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸ ಹೊರಡಿಸಿದ್ದಾರೆ.


ಕರ್ನಾಟಕ ಮೋಟಾರು ವಾಹನಗಳ ನಿಯಮ 1989, ನಿಯಮ 94(1)(ವಿ)ಯನ್ನು ಉಲ್ಲಂಘಿಸಿ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದ ಹೊರಸೂಸುವಂತೆ ಹಾಡು, ಪದ್ಯ, ವಾರ್ತೆ ಸಿನಿಮಾ ಇತ್ಯಾದಿ ಹಾಕುವುದನ್ನು ಶಬ್ದ ಮಾಲಿನ್ಯ ನಿಯಂತ್ರಣ ಸಂಬಂಧ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

- Advertisement -


ಈ ಸಂಬಂಧ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡುವುದು ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವಂತೆ ಮೊಬೈಲ್ ದೂರವಾಣಿ ಬಳಸುತ್ತಿದ್ದಲ್ಲಿ, ಆ ರೀತಿ ಬಳಸದಂತೆ ವಿನಂತಿಸುವುದು, ಒಂದು ವೇಳೆ ಈ ನಿಯಮ ಮೀರಿದಲ್ಲಿ, ಕರ್ನಾಟಕ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ, ಸದರಿ ಪ್ರಯಾಣಿಕರನ್ನು ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಸ್ಥಳದಲ್ಲಿಯೇ ನಿಗಮದ ಬಸ್ಸಿನಿಂದ ಇಳಿಸುವುದು, ಆ ಪ್ರಯಾಣಿಕನು ಇಳಿಯುವವರೆಗೂ ವಾಹನವನ್ನು ನಿಲ್ಲಿಸುವುದು. ಅಂತಹ ಪ್ರಯಾಣಿಕರಿಗೆ ಪ್ರಯಾಣದರವನ್ನು ಹಿಂದಿರುಗಿಸುವಂತಿಲ್ಲ ಎಂದು ತಿಳಿಸಿದ್ದಾರೆ.


ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ.

Join Whatsapp