ಹೊಸದಿಲ್ಲಿ: 2024ರಲ್ಲಿ ಮತದಾರರು ಮೋದಿ ಅವರಿಗೆ ಲುಕ್ ಔಟ್ ನೋಟಿಸ್ ನೀಡಲಿದ್ದಾರೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಸೋಡಿಯಾ, ಇಂದು ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಸಮಸ್ಯೆ ತಲೆದೋರಿದ್ದು, ಇವುಗಳಿಗೆ ಪರಿಹಾರ ನೀಡುವ ನಾಯಕನಿಗಾಗಿ ಜನರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ತಮ್ಮ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಆಕ್ರೋಶ ಹೊರಹಾಕಿರುವ ಅವರು ‘ನನ್ನ ವಿರುದ್ಧ ಸಿಬಿಐ ಲುಕ್ ಔಟ್ ನೋಟಿಸ್ ಹೊರಡಿಸಿರುವುದು ದುರದೃಷ್ಟಕರ. ನಮ್ಮ ಮೇಲೆ ನೀವು ಎಲ್ಲಾ ದಾಳಿಗಳನ್ನು ನಡೆಸಿದ್ದೀರಿ. ಆದರೆ, ನಮ್ಮ ಬಳಿ ಏನೂ ಪತ್ತೆಯಾಗಿಲ್ಲ. ಒಂದು ಪೈಸೆಯೂ ಸಿಕ್ಕಿಲ್ಲ. ಈಗ ಮನೀಶ್ ಸಿಸೋಡಿಯಾ ಸಿಗುತ್ತಿಲ್ಲ ಎಂದು ನನಗೆ ಲುಕ್ ಔಟ್ ನೋಟಿಸ್ ನೀಡಿದ್ದೀರಿ. ಇದೇನು ಗಿಮಿಕ್, ಮೋದಿ ಜೀ’ ಎಂದು ಪ್ರಶ್ನಿಸಿದ್ದಾರೆ.
ನಾನು ಸಾಮಾನ್ಯನಂತೆ ದೆಹಲಿಯಲ್ಲಿ ಮುಕ್ತವಾಗಿ ತಿರುಗುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.