ಮೈಸೂರು: ಸ್ಯಾಂಟ್ರೊ ರವಿ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಲೆ ಮರೆಸಿಕೊಂಡಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಪರಾರಿಯಾಗದಂತೆ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ರವಿ ವಿರುದ್ದ ವಿಜಯನಗರ ಠಾಣೆಯಲ್ಲಿ ಅತ್ಯಾಚಾರ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆತನ ಪತ್ತೆಗೆ ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು, ಗ್ರಾಮಾಂತರ ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಆತನ ಮನೆಯಲ್ಲಿ ಶೋಧ ನಡೆಸಿದ್ದೇವೆ. ಬ್ಯಾಂಕ್ ಖಾತೆ, ಲಾಕರ್ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಹೊರದೇಶಕ್ಕೆ ತೆರಳುವ ಸಾಧ್ಯತೆಯಿರುವುದರಿಂದ ಲುಕ್‌ಔಟ್ ನೋಟಿಸ್ ನೀಡಿದ್ದು, ಪ್ರಕರಣದ ತನಿಖೆಯಲ್ಲಿ ಯಾವುದೇ ಒತ್ತಡವಿಲ್ಲ. ರವಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಕುರಿತಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ವಿಚಾರಣೆ ನಡೆಸಲಿದ್ದು, ಬ್ಯಾಂಕ್ ಖಾತೆಗೆ ಮುಟ್ಟುಗೋಲಿಗೆ ಕ್ರಮ ವಹಿಸಲಾಗುವುದು ಎಂದರು.
ದೂರು ನೀಡಿದ ಸಂತ್ರಸ್ತೆ ಮತ್ತು ಆಕೆಯ ಸಹೋದರಿಯ ಹೇಳಿಕೆಯನ್ನು ಐಪಿಸಿ ಕಲಂ 164 ರಡಿ ದಾಖಲಿಸಲಾಗಿದೆ. ಯಾವುದೇ ಲೋಪವಾಗದಂತೆ ತನಿಖೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.