ಲಂಚಕ್ಕೆ ಬೇಡಿಕೆ: ಸರ್ವೇಯರ್ ಗಳು ಲೋಕಾಯುಕ್ತ ಬಲೆಗೆ

Prasthutha|

ಬಳ್ಳಾರಿ: ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು ಲಂಚ ಕೇಳಿದ ಇಬ್ಬರು ಸರ್ವೇಯರ್’ಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಜಿಲ್ಲೆಯ ಕಂಪ್ಲಿ ಪಟ್ಟಣದ ವಿನಾಯಕ ನಗರದಲ್ಲಿ ಸೋಮವಾರ ನಡೆದಿದೆ.

- Advertisement -


ಬಳ್ಳಾರಿ ಸರ್ವೇ ಕಚೇರಿಯ ಸಿಬ್ಬಂದಿಯಾದ ಕರಿಬಸಪ್ಪ ಮತ್ತು ವೀರೇಶ್ ಬಂಧಿತರು.


ವ್ಯಕ್ತಿಯೊಬ್ಬರು ಪಟ್ಟಣದಲ್ಲಿನ ತನ್ನ 1.76 ಎಕರೆ ಹಾಗೂ 1 ಎಕರೆ ಸೇರಿ ಒಟ್ಟು 2.76 ಎಕರೆ ಜಮೀನಿನ ಹದ್ದುಬಸ್ತು ಅಳತೆ ಮತ್ತು ನಕಾಶೆ ಸಿದ್ಧಪಡಿಸಿಕೊಡುವಂತೆ ಕಂಪ್ಲಿಯ ಸರ್ವೇ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ಅರ್ಜಿಗಳಿಗೆ ಸೇರಿ 4,200 ರೂ. ಶುಲ್ಕ ಪಾವತಿಸಿದ್ದರು.

- Advertisement -

ಈ ಜಮೀನುಗಳ ಸರ್ವೇಗೆ ಆಗಮಿಸಿದ್ದ ಸರ್ವೇ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಜಮೀನಿನ ಸರ್ವೇ ಮಾಡಿ ನಕಾಶೆ ತಯಾರಿಸಿಕೊಡಲು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಾತುಕತೆಯ ಬಳಿಕ 3 ಸಾವಿರ ರೂ ನೀಡಲು ಅರ್ಜಿದಾರ ಒಪ್ಪಿಕೊಂಡಿದ್ದರು ಎನ್ನಲಾಗಿದೆ.


ಈ ಕುರಿತು ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕರಿಬಸಪ್ಪ ಮತ್ತು ವೀರೇಶ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಆರೋಪಿಗಳನ್ನು ವಿನಾಯಕ ನಗರದಲ್ಲಿ 3 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ರೆಡ್’ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಣದ ಸಮೇತ ಸರ್ವೇ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಅವರನ್ನು ಬಂಧಿಸಲಾಗಿದೆ.

Join Whatsapp