ಮಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಇದೀಗಾಗಲೇ ನೈಟ್ ಕರ್ಪ್ಯೂ ಮತ್ತು ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ದ.ಕ ಸೇರಿದಂತೆ ಒಟ್ಟು 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶ ನೀಡಿತ್ತು. ಆದರೆ ನಿರೀಕ್ಷೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ನಿಯಂತ್ರಣಕ್ಕೆ ಬಾರದೆ ಇದ್ದರೇ ಆಗಸ್ಟ್ 15ರ ಬಳಿಕ ಸಂಪೂರ್ಣ ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಸಚಿವ ಕೋಟಾ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೊರೊನಾ ಪ್ರಕರಣಗಳ ನಿತ್ಯ ಹೆಚ್ಚಳದಿಂದಾಗಿ ಸರ್ಕಾರ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಪಾಸಿಟಿವಿಟಿ ಸಂಖ್ಯೆ ಶೂನ್ಯಕ್ಕೆ ಇಳಿದಿದ್ದ ಹಿನ್ನೆಲೆ ಹಂತ ಹಂತವಾಗಿ ಲಾಕ್ ಡೌನ್ ತೆರವು ಗೊಳಿಸಲಾಗಿತ್ತು. ಆದರೆ ಇದೀಗ ಅಪಾಯದ ಮಟ್ಟ ಮೀರುತ್ತಿರುವ ಹಿನ್ನೆಲೆ ಲಾಕ್ ಡೌನ್ ಅನಿವಾರ್ಯವಾದೀತು ಎಂದು ಹೇಳಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ನಿತ್ಯ ಪಾಸಿಟಿವಿಟಿ ಸಂಖ್ಯೆ ೨ ರಿಂದ ೪ ಕ್ಕೆ ಏರಿಕೆ ಆಗ್ತಾ ಇದೆ, ಈ ಬಗ್ಗೆ ಜನರೆಲ್ಲರೂ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳುವ ಅಗತ್ಯತೆ ಇದ್ದು, ಇಲ್ಲದಿದ್ದರೆ ಮುಂದೆ ಲಾಕ್ ಡೌನ್ ಮಾಡುವ ಅನಿವಾರ್ಯ ಉಂಟಾಗಲಿದೆ ಎಂದು ಹೇಳಿದರು. ಮುಂದಿನ ಲಾಕ್ ಡೌನ್ ಕುರಿತ ನಿರ್ಧಾರವನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದರು.