ತ್ರಿಪುರಾದಲ್ಲಿ ಚುನಾವಣಾಪೂರ್ವ ಮೈತ್ರಿಗೆ ಮುಂದಾದ ಮಮತಾ – ದೇಬ್ಬರ್ಮ : ಕಾವೇರಿದ ರಾಜ್ಯ ರಾಜಕೀಯ ರಂಗ

Prasthutha|

ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತು ಪ್ರದ್ಯೋತ್ ಕಿಶೋರ್ ದೇಬ್ಬರ್ಮಾ ಅವರ ತಿಪ್ರಾಹ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ (ಟಿ.ಐ.ಪಿ.ಆರ್.ಎ.) 2023 ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ತ್ರಿಪುರಾದಲ್ಲಿ ಮೈತ್ರಿ ಕುರಿತು ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಕ್ಷೀಣಿಸುತ್ತಿರುವ ಕಾಂಗ್ರೆಸ್-ಎಡ ಪಕ್ಷಗಳ ರಾಜಕೀಯ ಅಸ್ತಿತ್ವ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಮೈತ್ರಿ ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತಿದೆಯೆಂದು ಹೇಳಲಾಗುತ್ತಿದೆ.

- Advertisement -

ರಾಜಮನೆತನದ ದೇಬ್ಬರ್ಮ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವರನ್ನು ಕಳೆದ ಜುಲೈನಲ್ಲಿ ಕೋಲ್ಕತ್ತಾದಲ್ಲಿ ಭೇಟಿಯಾಗಿ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಇದರ ಮುಂದುವರಿದ ಭಾಗವಾಗಿ ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಭಿಷೇಕ್ ಬ್ಯಾನರ್ಜಿ ಅವರು ದೇಬ್ಬರ್ಮಾ ಅವರನ್ನು ಕಳೆದ ವಾರ ತ್ರಿಪುರಾದಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿರುವ ದೇಬ್ಬರ್ಮ ಅವರು, ಬುಡಕಟ್ಟು ಸಮುದಾಯದ ಜನರಿಗೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಮಮತಾ ಮತ್ತು ಅಭಿಷೇಕ್ ಅವರನ್ನು ಭೇಟಿಯಾಗಿದ್ದೇನೆಂದು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲದೇ ಬುಡಕಟ್ಟು ಸಮುದಾಯಕ್ಕೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಲಿಖಿತ ರೂಪದಲ್ಲಿ ಖಾತರಿಪಡಿಸುವ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವುದಾಗಿಯು ದೇಬ್ಬರ್ಮ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಮತಾ ಅವರು ತ್ರಿಪುರದಲ್ಲಿ ಹೆಚ್ಚುತ್ತಿರುವ ಸಾರ್ವಜನಿಕ ಸಮಸ್ಯೆಗಳನ್ನು ಅರ್ಥೈಸಿಕೊಂಡಿದ್ದಾರೆ. ಅದೇ ರೀತಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟವು ತ್ರಿಪುರಾದಲ್ಲಿ ನೆಲೆಕಳೆದುಕೊಳ್ಳುವ ಸೂಚನೆಯ ಹಿನ್ನೆಲೆಯಲ್ಲಿ ತ್ರಿಪುರಾ ಚುನಾವಣಾ ಮೈತ್ರಿಯ ಕುರಿತು ಚರ್ಚೆ ನಡೆಸಲಾಗಿದೆಯೆಂದು ಟಿಪ್ರಾ ಮುಖ್ಯಸ್ಥ ತಿಳಿಸಿದ್ದಾರೆ. ಈ ದೇಬ್ಬರ್ಮ ಅವರು ಈ ಹಿಂದೆ ತ್ರಿಪುರಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.
ಆಡಳಿತಾರೂಡ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ನಿಟ್ಟಿನಲ್ಲಿ ಟಿ.ಎಮ್.ಸಿ. ಮತ್ತು ಟಿಪ್ರಾದ ನಡುವೆ ಏರ್ಪಟ್ಟಿರುವ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮತ್ತು ಸಿಪಿಐಎಮ್, ಟಿ.ಎಮ್.ಸಿ ಹಾಗೂ ಟಿಪ್ರಾ ಪಕ್ಷವು ತ್ರಿಪುರಾದಲ್ಲಿ ಆಡಳಿತ ನಡೆಸುವುದರ ಕುರಿತು ಹಗಲುಗನಸು ಕಾಣುತ್ತಿದೆಯೆಂದು ವ್ಯಂಗ್ಯವಾಡಿದೆ.

Join Whatsapp