ಚಿಕ್ಕಬಳ್ಳಾಪುರ: ಅನ್ ಲಾಕ್ ಆಗಿದೆ ಎಂದು ಜನರೇ ಮೈ ಮರೆಯಬೇಡಿ. ಸದಾ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿ. ಸರ್ಕಾರದ ಜೊತೆ ಸಹಕರಿಸಿ. ಇಲ್ಲವಾದರೆ ಮತ್ತೆ 15 ದಿನಗಳ ನಂತರ ಈ ಹಿಂದಿನ ಲಾಕ್ ಡೌನ್ ಪರಿಸ್ಥಿತಿ ಜಾರಿ ಮಾಡಬೇಕಾಗುತ್ತದೆ ಎಂದು ರಾಜ್ಯದ ಜನರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪನವರು, ಕೊರೊನಾ ಮೂರನೇ ಅಲೆ ಎದುರಿಸಲು ದೇಶದಲ್ಲಿ ಮೊಟ್ಟ ಮೊದಲ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದೇವೆ. ಭಾರತದ ಆರು ರಾಜ್ಯದಲ್ಲಿ ಮಾತ್ರವೇ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಈ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಖಾಸಗಿ ಸಂಸ್ಥೆಗಳಿಗೆ ಸರ್ಕಾರದಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದರು.