ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಿ: ಹೆಚ್.ಡಿ.ಕೆಗೆ ಅನಿತಾ ಕುಮಾರಸ್ವಾಮಿ ಸಲಹೆ

Prasthutha|

ಬಿಡದಿ: ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಬೇಕು ಎಂದು ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.

- Advertisement -

‘ಜನತಾ ಪರ್ವ 1.O’ / ‘ಮಿಷನ್ 123’ ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ  ಜೆಡಿಎಸ್ ಸಂಘಟನಾ ಕಾರ್ಯಗಾರ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸಾಲ ಮನ್ನಾ ಮಾಡಿ ಎಂದು  ಕೇಳುತ್ತಿದ್ದಾರೆ. ಕಷ್ಟದಲ್ಲಿ ಇರುವ ಮಹಿಳೆಯರ ನೆರವಿಗೆ ಧಾವಿಸಬೇಕು ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಿಷ್ಟು; 

- Advertisement -

ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮ‌ ಕೊಡಿ. ಇದು ನಾನು ಕುಮಾರಸ್ವಾಮಿ ಅವರಿಗೆ ನೀಡುವ ಮುಖ್ಯವಾದ ಸಲಹೆ.

ರೈತರು ಮಾಡಿದ ಸಾಲ ಮನ್ನಾ ಕ್ರಾಂತಿಕಾರಿ ಕ್ರಮ. ಹಾಗೆಯೇ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ. ಮುಂದೆ ನೀವು ಅಧಿಕಾರಕ್ಕೆ ಬಂದರೆ ಅಂತಹ ಮಹಿಳೆಯರ ಸಾಲವನ್ನೂ ಮನ್ನಾ ಮಾಡಿ.

ಪಂಚರತ್ನ ಯೋಜನೆ ರೂಪಿಸುವ ಯೋಚನೆ ಶ್ಲಾಘನೀಯ. ಇದರ ಜತೆಗೆ ಉಚಿತ ಶಿಕ್ಷಣ ನೀಡಿದರೆ ಸಮಾಜಕ್ಕೆ, ರಾಜ್ಯಕ್ಕೆ ಇನ್ನೂ ಒಳ್ಳೆಯದು.

ಫ್ರೀ‌ ಹೆಲ್ತ್ ಸ್ಕೀಮ್ ಮಾಡಿದರೆ ಒಳ್ಳೆಯದು. ಈ ಮೂಲಕ ಬಡಜನರ ಆರೋಗ್ಯ ಬವಣೆ ತಪ್ಪುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ.

ಮಹಿಳೆಯರಿಗೆ ಉತ್ತಮ ಅವಕಾಶಗಳಿವೆ. ಎಲ್ಲರೂ ಪ್ರೋತ್ಸಾಹ ನೀಡಬೇಕು. ಚುನಾವಣಾ ಅಭ್ಯರ್ಥಿಗಳು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು.

ಸ್ವತಂತ್ರವಾಗಿ ಮಹಿಳೆಯರು ಕೆಲಸ ನಿಭಾಯಿಸಲು ಕಲಿಯಬೇಕು. ದೇವರು ಈ ಅವಕಾಶ ಕೊಟ್ಟಿದ್ದಾನೆ. ಸ್ವತಂತ್ರವಾಗಿ ಬದುಕಬೇಕು, ನಿರ್ಧಾರಗಳನ್ನು ಕೈಗೊಳ್ಳುವ ದಿಟ್ಟತನ ತೋರಬೇಕು.

ಮೊದಲು ಯಜಮಾನರನ್ನು ಕೇಳಬೇಕು ಅನ್ನೋದನ್ನು ಬಿಡಿ. ಸ್ವತಂತ್ರವಾಗಿ ಆಲೋಚನೆ ಮಾಡಿ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ನೀವೆಲ್ಲರೂ ಮುಂದೆ ಹೇಗೆ ಬೆಳೆಯಬೇಕು ಎಂಬುದನ್ನು ತೀರ್ಮಾನ ಮಾಡಿ.

ಅನೇಕ‌ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ಕೂಡ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ದೊಡ್ಡ ಸಾಧನೆ ಮಾಡಿದ್ದಾರೆ. ಪುರುಷ ಪ್ರಧಾನ ಸಮಾಜ ನಮ್ಮದು. ಮಹಿಳೆಯರಿಗೆ ಅವಕಾಶ ಸಿಗೋದು ಕಡಿಮೆ. ಆದರೆ ನಾವು ಇಂಡಿಪೆಂಡೆಂಟ್ ಆಗಿ ಇರಬೇಕು. ಮಹಿಳೆಯರ ಬಗ್ಗೆ ಟೀಕೆ ಟಿಪ್ಪಣಿ ಹೆಚ್ಚು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಕುಮಾರಸ್ವಾಮಿಯವರು ಮಾನವೀಯ ಗುಣವುಳ್ಳ ನಾಯಕರು. ಎರಡು ಬಾರಿ ಸಿಎಂ ಆದಾಗಲೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಯಾವೊಬ್ಬ ಮುಖ್ಯಮಂತ್ರಿ ಮಾಡದೇ ಇರುವ ಕಾರ್ಯಕ್ರಮ ನೀಡಿದ್ದಾರೆ. ಜನತಾ ದರ್ಶನದ ಮೂಲಕ  ಜನಮನದಲ್ಲಿ ನೆಲೆಸಿದ್ದಾರೆ.

ನಮಗೆಲ್ಲ ನಿಜವಾದ ಸ್ಪೂರ್ತಿ ಎಂದರೆ ದೇವೇಗೌಡರು. ನಾವು ನಾಚಿಕೊಳ್ಳುವ ರೀತಿ ಪಾದರಸ ರೀತಿ ಓಡಾಡುತ್ತಾರೆ. ಪ್ರತಿಯೊಂದು ವಿಷಯಕ್ಕೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರೇ ನಮಗೆಲ್ಲ ಸ್ಪೂರ್ತಿ

ಮೀಸಲಾತಿ ವಿಚಾರದಲ್ಲಿ ದೇವೇಗೌಡರ ಕೊಡುಗೆ ಅಪಾರ. ನಾನು ರಾಜಕಾರಣ ಏನಾದರೂ ತಿಳಿದುಕೊಂದಿದ್ದರೆ ಅದು ದೇವೇಗೌಡರಿಂದ.

ನಾನು ಅವರ ಸೊಸೆ ಎಂಬುದು ಒಂದು ಕಡೆಯಾದರೆ, ಇನ್ನೊಂದೆಡೆ ಅವರ ಅಪ್ಪಟ ಅಭಿಮಾನಿ. ಯಾವುದೇ ಒಂದು ವಿಚಾರಕ್ಕೆ ಬೇಜಾರಾದರೆ ಅವರ ಜೀವನ‌ವನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು. ಏನೋ‌ ಒಂದು ರೀತಿಯಾದ ಸಮಾಧಾನ ಆಗುತ್ತದೆ.

ಈಗ ಬದಲಾವಣೆ ಪರ್ವ ಬಂದಿದೆ ಅನ್ನುವ ಭಾವನೆ ನನಗಿದೆ. ಜನರೂ ಕೂಡ ಬದಲಾವಣೆ ಬಯಸುತ್ತಿದ್ದಾರೆ. ಬಡವರ, ರೈತರ ಪರ ಸರ್ಕಾರ ರಚನೆ ಮಾಡಬೇಕು. ದೂರದೃಷ್ಟಿ ಇರುವ ರಾಜಕಾರಣಿಗಳಾಗಿ ನಾವೆಲ್ಲ ಬೆಳೆಯಬೇಕು.
*
ವೇದಿಕೆಯ ಮೇಲೆ  ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್, ದೇವದುರ್ಗ ಮುಂದಿನ ಚುನಾವಣೆ ಅಭ್ಯರ್ಥಿ ಕರಿಯಮ್ಮ, ಬೆಂಗಳೂರು ನಗರದ ಮಹಿಳಾ ಜೆಡಿಎಸ್ ಅಧ್ಯಕ್ಷೆ ರುತ್ ಮನೋರಮಾ ಹಾಗೂ ಗೋಷ್ಠಿಯಲ್ಲಿ ಮುಖ್ಯ ಭಾಷಣ ಮಾಡಿದ ಕೆ.ಷರೀಫಾ ಇದ್ದರು.



Join Whatsapp