ಕತಾರ್‌ನಲ್ಲಿ ಕೊನೆಯ ವಿಶ್ವಕಪ್ ಆಡಲಿರುವ ಲಿಯೋನೆಲ್ ಮೆಸ್ಸಿ

Prasthutha|

ವಿಶ್ವ ಫುಟ್‌ಬಾಲ್‌ನ ದಿಗ್ಗಜ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ, ಮುಂಬರುವ ಕತಾರ್‌ ವಿಶ್ವಕಪ್‌, ತಮ್ಮ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಟೂರ್ನಿಯಾಗಿರಲಿದೆ ಎಂದು ಹೇಳಿದ್ದಾರೆ.

- Advertisement -

ಅಮೆರಿಕಾದ ಒಟಿಟಿ ಸ್ಟಾರ್+ನಲ್ಲಿ ಸೆಬಾಸ್ಟಿಯನ್ ವಿಗ್ನೊಲೊ ನಡೆಸಿಕೊಡುವ ‘ಇನ್ ಫಸ್ಟ್ ಪರ್ಸನ್’ ಶೋನಲ್ಲಿ ಗುರವಾರ ಭಾಗವಹಿಸಿದ್ದ ಫುಟ್ಬಾಲ್‌ ಮಾಂತ್ರಿಕ ಮೆಸ್ಸಿ, ಮಹತ್ವದ ಘೋಷಣೆ ಮಾಡಿದ್ದಾರೆ.

ʻಇದು ನಿಮ್ಮ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಆಗಿರಲಿದೆಯೇ ಎಂಬ ನಿರೂಪಕ ಸೆಬಾಸ್ಟಿಯನ್ ಪ್ರಶ್ನೆಗೆ “ಹೌದು, ಖಂಡಿತವಾಗಿ ಹೌದುʼ  ಎಂದು ಮೆಸ್ಸಿ ಉತ್ತರಿಸಿದ್ದಾರೆ.

- Advertisement -

ʻನಾನು ದೈಹಿಕವಾಗಿ ಸದೃಢನಾಗಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಾನು ಪ್ರಸಕ್ತ ವರ್ಷ ಉತ್ತಮ ಲಯದಲ್ಲಿದ್ದೇನೆ. ತಡವಾಗಿ ತರಬೇತಿಗಳಿಗೆ ಹಾಜರಾಗಿದ್ದು, ಗಾಯದ ಸಮಸ್ಯೆ ಹಾಗೂ, ರಾಷ್ಟ್ರೀಯ-ಕ್ಲಬ್‌ಗಳ ಪಂದ್ಯಗಳ ಗೊಂದಲಗಳಿಂದಾಗಿ ಕಳೆದ ವರ್ಷ ನನ್ನ ಪಾಲಿಗೆ ಉತ್ತಮವಾಗಿರಲಿಲ್ಲʼ ಎಂದು ಎಂದು ಸ್ಟಾರ್ +ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ʻವಿಶ್ವಕಪ್‌ ಟೂರ್ನಿ ಆರಂಭವಾಗುವುದನ್ನು ಕಾಯುತ್ತಿದ್ದೇನೆ. ಆದರೆ ನಿಜ ಹೇಳಬೇಂಕೆಂದರೆ  ಸ್ವಲ್ಪ ಆತಂಕವೂ ಇದೆ. ಫಲಿತಾಂಶ ಏನೇ ಆದರೂ ಅದು ಕೊನೆಯದಾಗಲಿದೆ. ವಿಶ್ವಕಪ್‌ ಗೆಲ್ಲಲು ನಾವು ಸರ್ವ ಪ್ರಯತ್ನ ನಡೆಸಲಿದ್ದೇವೆ. ನಮ್ಮ ಮೇಲಿನ ನಿರೀಕ್ಷೆಗಳೂ ಹೆಚ್ಚಾಗಿದೆʼ.

ʻನಾವು ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಎಂಬುದರ ಕುರಿತು ನನಗೆ ತಿಳಿದಿಲ್ಲ. ಆದರೆ ಫುಟ್‌ಬಾಲ್‌ ವಿಶ್ವಕಪ್‌ನ ಇತಿಹಾಸವನ್ನು ನೋಡಿದರೆ ಅರ್ಜೆಂಟೀನಾ, ಪ್ರತಿ ಬಾರಿಯೂ ಶ್ರೇಷ್ಠ ತಂಡವಾಗಿಯೇ ಕೂಟದಲ್ಲಿ ಸ್ಪರ್ಧಿಸಿದೆ. ಆದರೆ ಈ ಬಾರಿ ನಮಗಿಂತಲೂ ಬಲಿಷ್ಠವಾದ ತಂಡಗಳು ಕತಾರ್‌ನಲ್ಲಿ ಮೈದಾನಕ್ಕಿಳಿಯಲಿವೆʼ ಎಂದು ಮೆಸ್ಸಿ ವಿವರಿಸಿದ್ದಾರೆ.

28 ವರ್ಷಗಳ ಬಳಿಕ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ, 2021ರಲ್ಲಿ ಪ್ರತಿಷ್ಠಿತ ಕೋಪಾ ಅಮೆರಿಕ ಟೂರ್ನಿಯ ಚಾಂಪಿಯನ್‌ ಆಗಿತ್ತು. ಆ ಮೂಲಕ ಕತಾರ್‌ನಲ್ಲೂ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿ ಅರ್ಜೆಂಟೀನಾ ಮೂಡಿಬಂದಿದೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಕಳೆದ 3 ವರ್ಷಗಳಿಂದ ಅರ್ಜೆಂಟೀನಾ ತಂಡವನ್ನು ಮಣಿಸಲು ಎದುರಾಳಿಗಳಿಗೆ ಸಾಧ್ಯವಾಗಿಲ್ಲ. 2019ರ ಬಳಿಕ ಇದುವರೆಗೂ 35 ಪಂದ್ಯಗಳಲ್ಲಿ 35 ವರ್ಷದ ಮೆಸ್ಸಿ ಪಡೆ ಅಜೇಯ ಪಯಣವನ್ನು ಮುಂದುವರಿಸಿದೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದರೂ ಕ್ಲಬ್‌ ಫುಟ್‌ಬಾಲ್‌ನಲ್ಲಿ ಆಡುವುದನ್ನು ಮೆಸ್ಸಿ ಮುಂದುವರಿಸಲಿದ್ದಾರೆ. ಪಿಎಸ್‌ಜಿ ಕ್ಲಬ್‌ ಜೊತೆಗಿನ ಒಪ್ಪಂದವು ಈ ವರ್ಷಾಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ ಕರಾರು ಮುಂದುವರಿಸಲು ಪಿಎಸ್‌ಜಿ, ಈಗಾಗಲೇ ಪ್ರಯತ್ನ ಆರಂಭಿಸಿದೆ. ಆದರೆ ಮೆಸ್ಸಿ ತಮ್ಮ ಮೂಲ ಕ್ಲಬ್‌ ಆದ ಬಾರ್ಸಿಲೋನಾಗೆ ಮರಳುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಫುಟ್‌ಬಾಲ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಮೆಸ್ಸಿ, ದಾಖಲೆಯ 7 ಬ್ಯಾಲನ್ ಡಿ’ಓರ್ ಪ್ರಶಸ್ತಿ ಮತ್ತು 6 ಯುರೋಪಿಯನ್ ʻಗೋಲ್ಡನ್ ಶೂʼಗಳನ್ನು ಗೆದ್ದಿದ್ದಾರೆ. 2020 ರಲ್ಲಿ ಬ್ಯಾಲನ್ ಡಿ’ಓರ್ ಡ್ರೀಮ್ ತಂಡದಲ್ಲೂ ಸ್ಥಾನ ಪಡೆದಿದ್ದರು. 

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಸಕ್ರಿಯ ಆಟಗಾರರ ಪೈಕಿ ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ಈವರೆಗೂ 164 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮೆಸ್ಸಿ ಖಾತೆಯಲ್ಲಿ 90 ಗೋಲ್‌ಗಳಿವೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು, 191 ಪಂದ್ಯ ) ಮೊದಲನೇ ಸ್ಥಾನದಲ್ಲಿದ್ದಾರೆ. ಭಾರತದ ಹೆಮ್ಮೆಯ ಸುನಿಲ್‌ ಛೆಟ್ರಿ, 131 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 84 ಗೋಲ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Join Whatsapp