ಎಸ್ಟೋನಿಯಾ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಬರೋಬ್ಬರಿ ಐದು ಗೋಲು ದಾಖಲಿಸಿದ ಅರ್ಜೆಂಟೀನಾದ ನಾಯಕ, ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ದಾಖಲೆ ಬರೆದಿದ್ದಾರೆ.
ಸ್ಪೇನ್ ನ ಸದಾರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದುರ್ಬಲ ಎಸ್ಟೋನಿಯಾ ತಂಡ, ಮೆಸ್ಸಿ ಶೋ ಎದುರು ಸಂಪೂರ್ಣವಾಗಿ ಶರಣಾಯಿತು.
ತಮ್ಮ ವೃತ್ತಿಜೀವನದಲ್ಲಿ ಮೆಸ್ಸಿ ಎರಡನೇ ಬಾರಿಗೆ 5 ಗೋಲುಗಳ ಗೊಂಚಲನ್ನು ತಮ್ಮ ದಾಖಲೆಯ ಪುಟಕ್ಕೆ ಸೇರಿಸಿದ್ದಾರೆ. ಇದಕ್ಕೂ ಮೊದಲು ಬಾರ್ಸಿಲೋನಾ ತಂಡದ ಪರ ಆಡುತ್ತಿದ್ದ ವೇಳೆ ಮೆಸ್ಸಿ, 10 ವರ್ಷಗಳ ಹಿಂದೆ ಬಾಯೆರ್ ಲೆವೆರ್ ಕುಸೆನ್ ತಂಡದ ವಿರುದ್ಧ 5 ಗೋಲು ದಾಖಲಿಸಿದ್ದರು.
ಪಂದ್ಯ ಆರಂಭವಾಗಿ 8 ನಿಮಿಷ ಕಳೆಯುವಷ್ಟರಲ್ಲಿಯೇ ದೊರೆತ ಪೆನಾಲ್ಟಿ ಅವಕಾಶವನ್ನು ಮಿಸ್ ಮಾಡದ ಮೆಸ್ಸಿ ಗೋಲಿನ ಖಾತೆ ತೆರೆದರು.
ಆ ಬಳಿಕ ಮೊದಲಾರ್ಧದ ಅಂತಿಮ ನಿಮಿಷದಲ್ಲಿ ಕಾರ್ನರ್ ಭಾಗದಲ್ಲಿ ದೊರೆತ ಚೆಂಡನ್ನು ಗುರಿ ಸೇರಿಸುವ ಮೂಲಕ 2-0 ಮುನ್ನಡೆ ಒದಗಿಸಿದರು.
ದ್ವಿತೀಯಾರ್ಧದ ಪ್ರಾರಂಭದಲ್ಲೇ [ 47ನೇ ನಿಮಿಷ] ಮತ್ತೊಂದು ಗೋಲು ಗಳಿಸುವ ಮೂಲಕ ಹ್ಯಾಟ್ರಿಕ್ ಪೂರ್ತಿಗೊಳಿಸಿದ ಮೆಸ್ಸಿ, ಅಂತಾರಾಷ್ಟ್ರೀಯ ಕ್ಯಾರಿಯರ್ ನಲ್ಲಿ 8 ನೇ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದರು.
ಇದಾದ ಬಳಿಕ 71ನೇ ಮತ್ತು 76 ನಿಮಿಷದಲ್ಲೂ ಗೋಲು ಗಳಿಸಿದ ಮೆಸ್ಸಿ ತಂಡದ ಮುನ್ನಡೆಯನ್ನು 5-0ಗೆ ಏರಿಸಿದರು.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಜೆಂಟೀನಾ ತಂಡ ಇದೇ ಮೊದಲ ಬಾರಿಗೆ 5 ಗೋಲುಗಳ ಭಾರಿ ಅಂತರದ ಗೆಲುವು ಸಾಧಿಸಿದೆ.
ಇತ್ತೀಚೆಗಷ್ಟೇ ನಡೆದ ಫೈನಲಿಸಿಮಾ ಪಂದ್ಯದಲ್ಲಿ ಇಟಲಿ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ್ದ ಅರ್ಜೆಂಟೀನಾ, ತನ್ನ ಅಜೇಯ ಗೆಲುವಿನ ದಾಖಲೆಯನ್ನು [ 33 ಪಂದ್ಯ] ಮುಂದುವರಿಸಿದೆ.
ಆದರೆ ಶನಿವಾರ ನಡೆಯುವ ಪಂದ್ಯದಲ್ಲಿ ಮೆಸ್ಸಿ ಪಡೆ, ಬಲಿಷ್ಠ ಬ್ರೆಝಿಲ್ ತಂಡವನ್ನು ಎದುರಿಸಲಿದೆ.